0

“ತಾರುಣ್ಯದ ಹುಮ್ಮಸ್ಸು ರಾಷ್ಟ್ರ ನಿರ್ಮಾಣಕ್ಕೆ ಬಳಕೆಯಾಗಲಿ” ಯುವಜನತೆಗೆ ಚಕ್ರವರ್ತಿ ಸೂಲಿಬೆಲೆ ಕರೆ

PDIT;Hosapete 22-12-2022

ತಾರುಣ್ಯದ ಅದಮ್ಯ ಶಕ್ತಿಯನ್ನು ಸಾಮಾಜಿಕ ಬದುಕಿಗೆ ಸಮರ್ಪಣೆ ಮಾಡಿಕೊಳ್ಳುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಖ್ಯಾತ ವಾಗ್ಮಿ, ಚಿಂತಕ, ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಯುವಜನತೆಗೆ ಕರೆ ನೀಡಿದರು.

ಅವರು ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಯುವಾ ಬ್ರಿಗೇಡ್ ಸಹಯೋಗದಲ್ಲಿ ೨೨-೧೨-೨೦೨೨ ಗುರುವಾರದಂದು ಆಯೋಜಿಸಲಾಗಿದ್ದ “ಯೌವನದ ಹುಮ್ಮಸ್ಸು; ಸಾಮಾಜಿಕ ಜೀವನದ ಹವಿಸ್ಸು” ಎಂಬ ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
“ಪದವಿ ವಿದ್ಯಾಭ್ಯಾಸದ ನಾಲ್ಕು ವರ್ಷಗಳು ಜೀವನದ ಅತ್ಯಮೂಲ್ಯ ಸಮಯ; ವಿದ್ಯಾರ್ಥಿಗಳು ಈ ಸಮಯದಲ್ಲಿ ಧನಾತ್ಮಕ ಚಿಂತನೆಗಳನ್ನು ರೂಢಿಸಿಕೊಂಡು, ಸಮಾಜಮುಖಿಯಾಗಿ ಬೆಳೆಯಬೇಕು” ಎಂದರು.
ತಾಂತ್ರಿಕ ವಿದ್ಯಾರ್ಥಿಗಳು ಉದ್ಯೋಗ ಪಡೆಯುವ ಕನಸು ಕಾಣದೇ, ಉದ್ಯೋಗದಾತರಾಗುವತ್ತ ಪ್ರಯತ್ನಿಸಬೇಕು. ಸ್ಟಾರ್ಟಪ್ ಗಳಿಗೆ ಈಗ ಹಿಂದೆಂದಿಗಿಂತ ಉತ್ತಮಕಾಲ ಬಂದಿದೆ. ಹೊಸ ಆವಿಷ್ಕಾರಗಳ ಮೂಲಕ ಹೊಸ ಉದ್ಯಮ ಸ್ಥಾಪಿಸುವಲ್ಲಿ ತಾಂತ್ರಿಕ ಪದವೀಧರರು ಯಶಸ್ವಿಯಾಗುತ್ತಿದ್ದಾರೆ. ಒಂದು ಶತಕೋಟಿ ಮೌಲ್ಯವನ್ನು ಮೀರಿದ ಕಂಪನಿಗಳನ್ನು ಯುನಿಕಾರ್ನ್ ಎಂದು ಕರೆಯಲಾಗುತ್ತಿದೆ. ಜಗತ್ತಿನ ಹೆಚ್ಚು ಯುನಿಕಾರ್ನ್ ಗಳನ್ನು ಹೊಂದಿರುವ ದೇಶಗಳಲ್ಲಿ ಭಾರತ ಮೂರನೇ ಸ್ಥಾನ ಹೊಂದಿದೆ. ಕೆಲವೇ ವರ್ಷಗಳಲ್ಲಿ ಚೀನಾ ಹಾಗೂ ಅಮೆರಿಕಾಗಳನ್ನು ಹಿಂದಿಕ್ಕುವ ವೇಗದಲ್ಲಿ ಭಾರತ ಬೆಳೆಯುತ್ತಿದೆ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳು ಸಮಾಜವನ್ನು ಹತ್ತಿರದಿಂದ ಗಮನಿಸಿದಾಗ, ಜನರ ಬದುಕು ಬದಲಿಸಬಲ್ಲ ಹೊಸ ತಾಂತ್ರಿಕ ಆವಿಷ್ಕಾರಗಳು ಸಾಧ್ಯವಾಗುತ್ತವೆಯೇ ಹೊರತು ಏಸಿ ರೂಮಿನಲ್ಲಿ ಕುಳಿತವರಿಂದ ಅಲ್ಲ ಎಂದು ಅವರು ಕಿವಿಮಾತು ಹೇಳಿದರು. ಯುವಾ ಬ್ರಿಗೇಡ್ ಸಂಸ್ಥೆ ‘ಯುವಾಲ್ಯಾಬ್’ ಸ್ಥಾಪಿಸಿದ್ದು ಹೊಸ ವಿಚಾರ, ತುಡಿತಗಳೊಂದಿಗೆ ಬರುವ ಯುವಜನತೆಗೆ ಎಲ್ಲಾ ಪ್ರೋತ್ಸಾಹ ನೀಡಿ ಯಶಸ್ವಿಯಾಗಿ ಉದ್ಯಮ ಸ್ಥಾಪಿಸಲು ನೆರವಾಗುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಪ್ರಾಂಶುಪಾಲ ಡಾ. ಎಸ್.ಎಂ.ಶಶಿಧರ್  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಹೊಸ ಶಿಕ್ಷಣ ನೀತಿಯಲ್ಲಿ ಕೇವಲ ಪಠ್ಯಕ್ಕಷ್ಟೇ ಸೀಮಿತವಾಗದೇ, ಸಾಮಾಜಿಕ ಜವಾಬ್ದಾರಿಗಳನ್ನೂ ಅರಿಯುವ ಹಾಗೂ ಸರ್ವಾಂಗೀಣ ವ್ಯಕ್ತಿತ್ವ ವಿಕಾಸಕ್ಕೆ ಒತ್ತು ನೀಡುವ ವಿಷಯಗಳನ್ನು ಆಳವಡಿಸಲಾಗಿದೆ. ಈ ದಿಸೆಯಲ್ಲಿ ಇಂತಹ ಉಪನ್ಯಾಸಗಳು ಪ್ರೇರಣಾದಾಯಕವಾಗುತ್ತವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರೊ. ಮಧ್ವರಾಜ್ ಸ್ವರಚಿತ ದೇಶಭಕ್ತಿ ಗೀತೆ ಹಾಡಿದರು. ಉಪಪ್ರಾಂಶುಪಾಲ ಡಾ ಯು ಎಂ ರೋಹಿತ್, ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Filed in: Activities Tags: 

Get Updates

Share This Post

Related Posts

© 2023 PROUD TIMES : ಪ್ರೌಢ ವಿಜಯ. All rights reserved.