0

“ಮಹಿಳೆ ನಿಸರ್ಗದತ್ತವಾಗಿ ಸದೃಢಳು” -ವಿನೋದಾ ಕರಣಂ

ಮಹಿಳೆ ನಿಸರ್ಗದತ್ತವಾಗಿ ಸದೃಢಳು ಎಂದು ಇತಿಹಾಸ ಪುರಾಣಗಳು ಸಾರಿ ಹೇಳಿವೆ ಎಂದು ಲೇಖಕಿ ವಿನೋದಾ ಕರಣಂ ಅಭಿಪ್ರಾಯಪಟ್ಟರು.

ಅನ್ನಪೂರ್ಣ ಪಬ್ಲಿಕೇಶನ್ಸ್ ಮತ್ತು ಕ್ರಿಯೇಷನ್ಸ್, ಸಿರಿಗೇರಿ ಸಂಸ್ಥೆಯು ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕವಿಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು

ಸ್ತ್ರೀಯನ್ನು ಶಕ್ತಿ ದೇವತೆ ಎಂದು ಪುರಾಣಗಳು ಬಿಂಬಿಸಿವೆ. ಮಹಿಳೆ ಇಲ್ಲದೆ ಈ ಜಗವೇ ಇಲ್ಲ. ಮಹಿಳೆ ಇಲ್ಲದೆ ಬದುಕೇ ಇಲ್ಲ… ಪ್ರತಿಯೊಬ್ಬರ ಬದುಕಿನಲ್ಲಿ ಹೆಣ್ಣು ನಿರ್ವಹಿಸದ ಪಾತ್ರವಿಲ್ಲ.  ಅದೇ ಕಾರಣಕ್ಕೆ ಮಹಿಳೆಯ ಈ ದಣಿವರಿಯದ ಕೆಲಸ, ಸಾಮರ್ಥ್ಯ, ಶ್ರಮವನ್ನು ಗೌರವಿಸುವ ಸಲುವಾಗಿ ಪ್ರತಿವರ್ಷ ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಅವರು ಹೇಳಿದರು.

ಸಮಾರಂಭದ ಅಧ್ಯಕ್ಶತೆ ವಹಿಸಿದ್ದ ನಿವೃತ್ತ ವೈದ್ಯೆ, ಲೇಖಕಿ ಡಾ. ಎಸ್.ಡಿ.ಸುಲೋಚನ “ಹೆಣ್ಣು ಭ್ರೂಣ ಹತ್ಯೆಯಂತಹ ಅಪರಾಧಿ ಕೃತ್ಯಗಳು ನಮ್ಮ ಸಾಮಾಜದ ಮತ್ತು ಸಂಸ್ಕೃತಿಯ ಮೇರು ಸ್ಥಾನಕ್ಕೆ ಕಪ್ಪು ಚುಕ್ಕೆಗಳಾಗಿವೆ; ಸುಶಿಕ್ಷಿತ ಸಮಾಜಕ್ಕೆ ಅಂಟಿದ ಕಳಂಕವಾಗಿದೆ. ಸ್ತ್ರೀ ಶಿಕ್ಷಣ ಸಾಕ್ಷರತೆ ಮಾತ್ರವೇ ಆಕೆಯ ಸಬಲೀಕರಣಕ್ಕೆ ಮಾರ್ಗವಾಗಬಲ್ಲದು.” ಎಂದು ಅಭಿಪ್ರಾಯಪಟ್ಟರು.

ಸಮಾರಂಭದ ಮತ್ತೊಬ್ಬ ಅತಿಥಿ ಪಿಡಿಐಟಿಯ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಶರಣಬಸಮ್ಮ ಮಾತನಾಡಿ “ಪ್ರತಿದಿನವೂ ಮಹಿಳಾ ದಿನವೇ. ಮಹಿಳಾ ದಿನವನ್ನು ಒಂದೇ ದಿನಕ್ಕೆ ಸೀಮಿತಗೊಳಿಸಲು ಖಂಡಿತಾ ಸಾಧ್ಯವಿಲ್ಲ. ಯಾಕೆಂದರೆ, ಮನೆ, ಕುಟುಂಬ, ಕಚೇರಿ, ಮಕ್ಕಳು, ಕೆಲಸ ಹೀಗೆ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಹೆಣ್ಣಿನ ಶಕ್ತಿಗೆ ಅದರದ್ದೇ ಆದ ಮಹತ್ವವಿದೆ. ಇದೇ ಕಾರಣಕ್ಕೆ ಹೆಣ್ಣಿಗೆ ಒಂದು ದಿನ ಸಾಂಕೇತಿಕವಾಗಿ ಮೀಸಲಿಟ್ಟು ಆಕೆಯನ್ನು ಗೌರವಿಸಲಾಗುತ್ತದೆ.” ಎಂದರು.

 ಈ ಸಮಾರಂಭದಲ್ಲಿ ನಿವೃತ್ತ ವೈದ್ಯಾಧಿಕಾರಿಗಳ ಡಾ. ಎಸ್.ಡಿ.ಸುಲೋಚನ ಅವರ ‘ಅತ್ರಿ ಮತ್ತು ಇತರ ಕಥೆಗಳು’ ಕೃತಿಯನ್ನು ಲೋಕಾರ್ಪಣೆಗೊಳಿಸಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಲೇಖಕಿಯರಾದ ಎನ್.ಡಿ.ವೆಂಕಮ್ಮ,ಡಾ. ಅಂಜನಾ ಕೃಷ್ಣಪ್ಪ, ಅಂಜಲಿ ಬೆಳಗಲ್,ಡಾ. ನಾಗ ಪುಷ್ಪಲತಾ ಮುಂತಾದವರು ಮಾತನಾಡಿದರು. ಬಳ್ಳಾರಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ  ಕವಯಿತ್ರಿಯರು ತಮ್ಮ ಕವಿತೆಗಳನ್ನು ವಾಚಿಸಿದರು.

Filed in: Events Tags: 

Get Updates

Share This Post

Related Posts

© 2021 PROUD TIMES : ಪ್ರೌಢ ವಿಜಯ. All rights reserved.