0

“ಪರಂಪರೆಯ ರಕ್ಷಣೆ; ನಮ್ಮೆಲ್ಲರ ಹೊಣೆ”-ಡಾ. ಆರ್. ಮಂಜನಾಯ್ಕ

೨೫-೧೧-೨೦೨೨ ಹೊಸಪೇಟೆ

ಪಿಡಿಐಟಿ ವಿದ್ಯಾರ್ಥಿಗಳಿಂದ ಹೆರಿಟೇಜ್ ವಾಕ್, ‘ವಿಶ್ವ ಪರಂಪರೆಯ ಸಪ್ತಾಹ’ ಆಚರಣೆ

“ಭವಿಷ್ಯದ ಪೀಳಿಗೆಗಳಿಗಾಗಿ ನಮ್ಮ ಇತಿಹಾಸ, ಪರಂಪರೆಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ” ಎಂದು ಹಂಪಿಯ ಅಸಿಸ್ಟೆಂಟ್ ಆರ್ಕಿಯಾಲಜಿಸ್ಟ್ ಡಾ. ಆರ್. ಮಂಜನಾಯ್ಕ ಅವರು ಹೇಳಿದರು.

ಅವರು ೨೫-೧೧-೨೦೨೨ ಶುಕ್ರವಾರದಂದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಕಮಲಾಪುರ-ಹಂಪಿ ಹಾಗೂ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ, ಹೊಸಪೇಟೆ ಇವರ ಸಹಯೋಗದಲ್ಲಿ ಇಂದು ವಿಶ್ವ ಪರಂಪರೆ ಸಪ್ತಾಹ-2022ರ ಅಂಗವಾಗಿ ಹಂಪಿಯ ಕಮಲ್ ಮಹಲ್ ಬಳಿ ಇರುವ ವೈಷ್ಣವ ದೇವಾಲಯದ ಬಳಿ “ಪಾರಂಪರಿಕ ನಡಿಗೆ ಮತ್ತು ಐತಿಹಾಸಿಕ ಸ್ಮಾರಕಗಳ ಪ್ರಾತ್ಯಕ್ಷಿಕ ಮಾರ್ಗದರ್ಶನ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ತಲತಲಾಂತರದಿಂದ ಬಂದ ಆಚರಣೆ, ಪದ್ಧತಿ ಹಾಗೂ ಉಳಿದು ಬಂದಿರುವ ದೇವಾಲಯಗಳು ಮತ್ತು ವಸ್ತುಗಳು ನಮ್ಮ ಪರಂಪರೆ ಎಂದು ತಿಳಿಯಲಾಗಿದೆ. ಪರಂಪರೆಯು ಒಂದು ಜನಾಂಗ ಸಮುದಾಯದ ಪದ್ಧತಿಯೆಂದು ಅರಿಯಲಾಗಿದೆ ಎಂದು ಹೇಳುತ್ತಾ ಪರಂಪರೆಯಲ್ಲಿ ಮುಖ್ಯವಾಗಿ ಮೂರ್ತ ಪರಂಪರೆ ಇದರಲ್ಲಿ ದೇವಾಲಯ, ಮಂದಿರ, ಮಸೀದಿ, ಇಗರ್ಜಿ, ಅರಮನೆ, ಗುರುಮನೆ, ಶಾಲಾ ಕಟ್ಟಡ, ಸಾರ್ವಜನಿಕ ಕಟ್ಟಡಗಳು ಸೇರಿದಂತೆ ಇವು ಮೂರ್ತ ಪರಂಪರೆಯಾಗಿದೆ. ಅದೇ ರೀತಿ ಅಮೂರ್ತ ಪರಂಪರೆಯಲ್ಲಿ ಜನಾಂಗದ ಬದುಕನ್ನು ಮತ್ತು ನಂಬಿಕೆಗಳನ್ನು ಪ್ರತಿಬಿಂಬಿಸುತ್ತದೆ. ಉದಾಹರಣೆಗೆ ಕರಕುಶಲ, ಕಲೆ, ಹಾಡುಗಾರಿಕೆ, ಹಬ್ಬ ಹರಿದಿನಗಳ ಆಚರಣೆ, ಪೂಜಾ ಪದ್ದತಿ, ಭಾಷೆ, ಸಾಂಪ್ರದಾಯಿಕ ವೈದ್ಯ ಪದ್ಧತಿ ಇವು ಅಮೂರ್ತ ಪರಂಪರೆಯ ಮುಖ್ಯ. ಅವುಗಳನ್ನು ಪದೇಪದೇ ಆಚರಿಸುವುದು ಇದರ ಜೀವಾಳವಾಗಿದೆ. ಇವುಗಳನ್ನು ಸಂರಕ್ಷಿಸಿ, ಉಳಿಸಿ ಮುಂದಿನ ಪೀಳಿಗೆಗೆ ಉಳಿಸಬೇಕೆಂದು ಯುವ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿಕೊಂಡರು.

ಭಾರತದಲ್ಲಿ ವಿಶ್ವ ಪರಂಪರೆ ಪಟ್ಟಿಯಲ್ಲಿ ಸುಮಾರು 28 ಸ್ಮಾರಕಗಳಿರುವುದು ನಮ್ಮ ಹೆಮ್ಮೆ ಅದರಲ್ಲೂ ಕರ್ನಾಟಕದಲ್ಲಿ ವಿಶೇಷವಾಗಿ 1986ರಲ್ಲಿ ಹಂಪಿಯ ಸ್ಮಾರಕಗಳ ಗುಂಪು ಮತ್ತು 1987ರಲ್ಲಿ ಪಟ್ಟದಕಲ್ಲು ಸ್ಮಾರಕಗಳ ಗುಂಪು ಇವುಗಳನ್ನು ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಯಲ್ಲಿ ಸೇರಿಸಿರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ. ಇಂತಹ ಸ್ಮಾರಕಗಳನ್ನು ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೋ 1972ರ ಅಧಿವೇಶನದಲ್ಲಿ ನೈಸರ್ಗಿಕ ಮತ್ತು ಸಾಂಸ್ಕೃತಿಕ ಆಚರಣೆಗಳಲ್ಲಿ ಆಗುತ್ತಿರುವ ತೀವ್ರ ಬದಲಾವಣೆಗಳನ್ನು ಗಮನಿಸಿ ಮನುಕುಲದ ಪರಂಪರೆಗೆ ಮಾರಕ ಆಗುವಂತಹ ಕ್ರಮಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲವು ಒಪ್ಪಂದಗಳನ್ನು ಸದಸ್ಯ ರಾಷ್ಟ್ರಗಳೊಂದಿಗೆ ಮಾಡಿಕೊಂಡಿತು. 1975ರಲ್ಲಿ ಸುಮಾರು 22 ದೇಶಗಳು ಒಪ್ಪಿಗೆ ಸೂಚಿಸಿದ್ದರೆ ಈಗ ಸಹಮತ ವ್ಯಕ್ತಪಡಿಸಿರುವ ದೇಶಗಳ ಸಂಖ್ಯೆ 175ಕ್ಕೂ ಮೀರಿದೆ. ಪ್ರಸ್ತುತ ಸುಮಾರು 153 ದೇಶಗಳ 936 ಸಾಂಸ್ಕೃತಿಕ ಮತ್ತು ನೈಸರ್ಗಿಕ ತಾಣಗಳು ವಿಶ್ವ ಪರಂಪರೆ ಪಟ್ಟಿಯಲ್ಲಿ ಸೇರಿವೆ. ಹಂಪಿಯ ಐತಿಹಾಸಿಕ ಸ್ಮಾರಕಗಳ ವಾಸ್ತುಶಿಲ್ಪದ ವಿಶೇಷತೆ ಮತ್ತು ಸ್ಮಾರಕಗಳ ಮಹತ್ವದ ಕುರಿತು ವಿವರಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ. ಎಸ್. ಎಂ. ಶಶಿಧರ, ಪ್ರಾಂಶುಪಾಲರು, ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ, ಹೊಸಪೇಟೆ ಇವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಹಂಪಿಯ ಸ್ಮಾರಕಗಳನ್ನು ಎಷ್ಟು ಬಾರಿ ನೋಡಿದರೂ ನಮಗೆ ಹೊಸ ಹೊಸ ವಿಷಯಗಳು ತಿಳಿದು ಬರುತ್ತದೆ. ನಾನು ಅನೇಕ ಬಾರಿ ಹಂಪಿಯನ್ನು ವೀಕ್ಷಿಸಿದರು ಈ ಬಾರಿಯ ವೀಕ್ಷಣೆಯನ್ನು ವಿದ್ಯಾರ್ಥಿಗಳೊಂದಿಗೆ, ಸಹೋದ್ಯೋಗಿಗಳೊಂದಿಗೆ ಹಾಗೂ ಪುರಾತತ್ವ ಇಲಾಖೆಯ ಅಧಿಕಾರಿಗಳೊಂದಿಗೆ ಹಂಪಿಯ ವೀಕ್ಷಣೆ ಮಾಡಿದ್ದು ನನ್ನ ಪುಣ್ಯ ಎಂದು ತಿಳಿಸುತ್ತಾ ಹಂಪಿಯ ಸ್ಮಾರಕಗಳಿಗೂ ನನಗೂ ತುಂಬಾ ಪ್ರೀತಿ ಮತ್ತು ನಂಟು ಎಂದು ತಿಳಿಸುತ್ತಾ ತಮ್ಮಲ್ಲಿದ್ದ ಸ್ಮಾರಕಗಳ ಪ್ರೀತಿಯನ್ನು ವ್ಯಕ್ತಪಡಿಸಿದರು ಅಲ್ಲದೆ ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಗಳು ತುಂಬಾ ಆಸಕ್ತಿಯಿಂದ ಮತ್ತು ಕುತೂಹಲದಿಂದ ಹಂಪಿಯ ಸ್ಮಾರಕಗಳನ್ನು ಪಾರಂಪರಿಕ ನಡಿಗೆಯ ಮೂಲಕ ವೀಕ್ಷಣೆ ಮಾಡಿದ್ದು ನನಗೆ ತುಂಬಾ ಸಂತೋಷಕರವೆನಿಸಿದೆ. ಈ ಕಾರ್ಯಕ್ರಮವನ್ನು ಆಯೋಜಿಸಿದ ರಾಜ್ಯ ಪುರಾತತ್ವ ಇಲಾಖೆಗೂ ಹಾಗೂ ನಮ್ಮ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗಕ್ಕೂ ನಾನು ಹೃದಯಪೂರ್ವಕದ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದು ಹೇಳುತ್ತಾ ಅಲ್ಲದೆ ನಾನು ಹಲವಾರು ರಾಜ್ಯಗಳಲ್ಲಿ ಪ್ರವಾಸವನ್ನು ಮಾಡಿರುತ್ತೇನೆ. ಆದರೆ ಹಂಪಿಯ ಸ್ಮಾರಕಗಳಷ್ಟು ಮಹತ್ವ ಬೇರೆಲ್ಲೂ ಇಲ್ಲ ಅದರಲ್ಲೂ ಹಂಪಿ ಪರಿಸರದಲ್ಲಿ ನಾವು ವಾಸಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ ನಾವು ಬೇರೆ ಕಡೆ ಹೋದರೆ ಹೊಸಪೇಟೆ ಎಂದರೆ ಸಾಕಷ್ಟು ಜನರಿಗೆ ಗೊತ್ತೇ ಆಗುವುದಿಲ್ಲ ಆದರೆ ಹಂಪಿ ಎಂದರೆ ಬೇಗ ಗೊತ್ತಾಗುತ್ತದೆ ಎಂದು ಹೇಳುತ್ತಾ ವಿದ್ಯಾರ್ಥಿಗಳಿಗೆ ಇಂತಹ ಸ್ಮಾರಕಗಳ ಸಂರಕ್ಷಣೆಯ ಬಗ್ಗೆ ಕಿವಿ ಮಾತನ್ನು ನೀಡಿದರು.

ಶ್ರೀಮತಿ ಪಾರ್ವತಿ ಕಡ್ಲಿ ಮುಖ್ಯಸ್ಥರು, ಸಿ. ಎಸ್. ಸಿ. ವಿಭಾಗ ಹಾಗೂ ಶ್ರೀಮತಿ ವಸಂತಮ್ಮ, ಕೋ ಆರ್ಡಿನೇಟರ್, ಎಸ್. ಸಿ. ಆರ್. ಇವರುಗಳು ಸಹ ಕಾರ್ಯಕ್ರಮದ ಮುಖ್ಯ ಅತಿಥಿಗಳ ಭಾಷಣದಲ್ಲಿ ಹಂಪಿಯ ಸ್ಮಾರಕಗಳು ಹಾಗೂ ಇಂದಿನ ಪಾರಂಪರಿಕ ನಡಿಗೆ ಕಾರ್ಯಕ್ರಮವು ನಮಗೆ ತುಂಬಾ ಖುಷಿ ಮತ್ತು ಸಂತೋಷವನ್ನು ಉಂಟು ಮಾಡಿದೆ ಎಂದು ಹೇಳುತ್ತಾ ಹಂಪಿಯ ಸ್ಮಾರಕಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಾಗಿ ಡಾ. ವಿಜಯಕುಮಾರ್ ಎ. ವಿ., ಸಹ ಪ್ರಾಧ್ಯಾಪಕರು, ಡಾ. ಮಂಜುಳಾ ಎಸ್. ಡಿ., ಸಹ ಪ್ರಾಧ್ಯಾಪಕರು,  ಶ್ರೀಮತಿ ಶಾಹಿದ ಬೇಗಂ, ಸಹಾಯಕ ಪ್ರಾಧ್ಯಾಪಕರು, ಶ್ರೀಮತಿ ಮಾನಸ, ಸಹಾಯಕ ಪ್ರಾಧ್ಯಾಪಕರು, ಸಿದ್ದಲಿಂಗೇಶ್ವರ, ಉದಯಶಂಕರ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಸ್ವಾಗತವನ್ನು ಶ್ರೀ ಬಿ. ಈರಣ್ಣ, ವಂದನಾರ್ಪಣೆಯನ್ನು ಶ್ರೀ ಹನುಮಂತಪ್ಪ ಹಾಗೂ ನಿರೂಪಣೆಯನ್ನು ಶ್ರೀಹರಿ, ಪ್ರಥಮ ದರ್ಜೆ ಸಹಾಯಕರು, ಪ್ರವಾಸೋದ್ಯಮ ಇಲಾಖೆ, ಕಮಲಾಪುರ ಇವರುಗಳು ನಿರ್ವಹಿಸಿದರು.

ಈ ಕಾರ್ಯಕ್ರಮಕ್ಕಿಂತ ಪೂರ್ವವಾಗಿ ಬೆಳಿಗ್ಗೆ ಎಂಟು ಗಂಟೆಯಿಂದಲೇ ಹಂಪಿ ಪರಿಸರದಲ್ಲಿರುವ ಗೆಜ್ಜಲ ಮಂಟಪ, ಕುದುರೆ ಗೊಂಬೆ ಮಂಟಪ, ವಿಜಯ ವಿಠಲ ದೇವಸ್ಥಾನ, ಪುರಂದರ ದಾಸರ ಮಂಟಪ, ಸೀತೆ ಸೆರಗು, ಅಚ್ಯುತ್ತ ದೇವಾಲಯ, ಕೋದಂಡರಾಮಸ್ವಾಮಿ ದೇವಾಲಯ, ಯಂತ್ರೋದ್ಧಾರಕ, ವಿರೂಪಾಕ್ಷ ಬಜಾರ್, ವಿರೂಪಾಕ್ಷ ದೇವಾಲಯ, ಹೇಮಕೂಟ ದೇವಾಲಯಗಳು, ಕಡ್ಲೆಕಾಳು ಗಣಪತಿ, ಸಾಸವೆ ಕಾಳು ಗಣಪತಿ, ಕೃಷ್ಣ ದೇವಸ್ಥಾನ, ಬಡವಿಲಿಂಗ, ಲಕ್ಷ್ಮೀನರಸಿಂಹ, ಕಮಲ್ ಮಹಲ್, ಗಜ ಶಾಲೆ, ಹಜಾರ ರಾಮ ದೇವಸ್ಥಾನ, ಮಹಾನವಮಿ ದಿಬ್ಬ, ರಾಣಿ ಸ್ನಾನ ಗೃಹ, ಹೀಗೆ ಸುಮಾರು 15 ಕಿಲೋಮೀಟರ್ ದೂರ ನಡೆದು ಪಾರಂಪರಿಕ ನಡಿಗೆಯಲ್ಲಿ ಪಾಲ್ಗೊಂಡು ಹಂಪಿಯ ಸ್ಮಾರಕಗಳ ಮಹತ್ವವನ್ನು ತಿಳಿದುಕೊಂಡರು.

Filed in: Activities, Computer Science Tags: 

Get Updates

Share This Post

Related Posts

© 2023 PROUD TIMES : ಪ್ರೌಢ ವಿಜಯ. All rights reserved.