0

ಜಡತ್ವವನ್ನು ಹೊಡೆದೋಡಿಸಿ ಚಲನಶೀಲತೆಯನ್ನು ರೂಪಿಸಿಕೊಳ್ಳಲು ಕರೆ

  

             ವಿದ್ಯಾರ್ಥಿಗಳಲ್ಲಿರುವ ಜಡತ್ವವನ್ನು ಹೊಡೆದೋಡಿಸಿ ಚಲನಶೀಲತೆಯನ್ನು ರೂಪಿಸಲು  ಹೊಸಪೇಟೆಯ ಯುವ ನಾಯಕ ಸಿದ್ಧಾರ್ಥ ಸಿಂಗ್ ಕರೆ ನೀಡಿದರು.
ಅವರು ಶುಕ್ರವಾರದಂದು  ಹೊಸಪೇಟೆಯ ಪ್ರೌಢ ದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ವಿಜಯನಗರ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.
ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಬದುಕಿನಲ್ಲಿ ಪದವಿ ಪೂರ್ವ ಶಿಕ್ಷಣ ಬಹಳ ಮಹತ್ವವನ್ನು ಹೊಂದಿದೆ. ಬದಲಾಗುತ್ತಿರುವ ತಾಂತ್ರಿಕ ಯುಗದಲ್ಲಿ ಸಮರ್ಪಕವಾದ ಬದುಕನ್ನು ರೂಪಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ನೆರವಾಗಬೇಕೆಂದು ಪ್ರಾಚಾರ್ಯರ ಸಂಘಕ್ಕೆ  ಸಿದ್ಧಾರ್ಥ ಸಿಂಗ್ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ.ನಮೋಶಿ ಮಾತನಾಡಿ “ಸರ್ಕಾರವು   ಟಾಟಾ ಟೆಕ್ನಾಲಜಿಯ ಸಹಯೋಗದಲ್ಲಿ ರಾಜ್ಯದ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಆಧುನೀಕರಣ ಮಾಡುತ್ತಿದೆ. ಸರ್ಕಾರಿ  ಪದವಿ ಪೂರ್ವ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿ ಅವರ ಗೌರವಧನವನ್ನೂ ಹೆಚ್ಚಿಸಿದೆ. ವಿಜಯನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಜಿಲ್ಲಾ ಖನಿಜ ನಿಧಿಯ ಸದ್ಬಳಕೆಯಾಗುತ್ತಿದೆ, ಸರ್ಕಾರದ ಅಭಿವೃದ್ಧಿಯ ಯೋಜನೆಗಳಿಂದ ಇಡೀ ಕಲ್ಯಾಣ ಕರ್ನಾಟಕ ಪ್ರಗತಿಯನ್ನು ಸಾಧಿಸಲಿದೆ” ಎಂದು ತಿಳಿಸಿದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಪಪೂಶಿ ಇಲಾಖೆಯ ಉಪ ನಿರ್ದೇಶಕ ಹೆಚ್.ಸುಗೇಂದ್ರ ವಿದ್ಯಾರ್ಥಿಗಳ ಸಾಧನೆಯೇ ಸಂಘದ ಉದ್ದೇಶವಾಗಲಿ ಎಂದು ಹಾರೈಸಿದರು. ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಅಧ್ಯಕ್ಷ ಪಲ್ಲೇದ ದೊಡ್ದಪ್ಪ, ಪ್ರಾಚಾರ್ಯ  ಡಾ. ಎಸ್.ಎಂ.ಶಶಿಧರ,  ಬಳ್ಳಾರಿ ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಮೋಹನ್ ರೆಡ್ಡಿ, ಖಜಾನೆ ಉಪನಿರ್ದೇಶಕ ವೆಂಕಟೇಶ ಮೂರ್ತಿ ಮುಂತಾದವರು ಮಾತನಾಡಿದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕರಾದ ನಾಗರಾಜಪ್ಪ, ವೀರೇಶಪ್ಪ ಹಾಗೂ ನಿವೃತ್ತ   ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಸಿ&ಡಿ ವರ್ಗದ ನೌಕರರನ್ನು ಸನ್ಮಾನಿಸಲಾಯಿತು. ನಂತರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕೊಟ್ಟೂರಿನ ಇಂದು ಕಾಲೇಜಿನ ಕು ಶ್ವೇತಾ ಸೇರಿದಂತೆ ವಿಜಯನಗರ ಜಿಲ್ಲೆಯ ಅತ್ಯುತ್ತಮ ಸಾಧನೆ ಮಾಡಿದ ೨೨ ವಿದ್ಯಾರ್ಥಿಗಳನ್ನು ಸನ್ಮಾನ ಮಾಡಲಾಯಿತು. ಜಿಲ್ಲೆಯಿಂದ ವರ್ಗಾವಣೆಯಾದ ಉಪನಿರ್ದೇಶಕ ರಾಜು ಎನ್. ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು ಹಾಗೂ ನೂತನ ಉಪನಿರ್ದೇಶಕರಾದ ಎಚ್. ಸುಗೇಂದ್ರ ಅವರನ್ನು ಸ್ವಾಗತಿಸಲಾಯಿತು.
ಉಪನ್ಯಾಸಕ ಕರ್ಣಂ ವಾಸುದೇವ ಭಟ್ ನಿರೂಪಿಸಿದರು. ವೇದಿಕೆಯಲ್ಲಿ ಪ್ರಾಚಾರ್ಯರ ಸಂಘದ ಕಾರ್ಯದರ್ಶಿ ಶಿವರಾಮ, ಕೆ.ವೆಂಕಟರೆಡ್ಡಿ, ಬಸವರಾಜ ಗೌಡ್ರು, ಡಾ.ರಾಜಣ್ಣ, ಗೋವಿಂದ ಕುಲಕರ್ಣಿ, ಜೆ.ಮರೇಗೌಡ್ರು, ಕಾರ್ಯದರ್ಶಿ ಜೆ.ಸಿದ್ರಾಮ ಮುಂತಾದವರು ಉಪಸ್ಥಿತರಿದ್ದರು. ಕು. ಎಚ್.ಕೆ.ಸಹನಾ ಮತ್ತು ಸೌಮ್ಯ  ಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಪ್ರಾಚಾರ್ಯರ ಸಂಘದ ಖಜಾಂಚಿ ಎನ್.ಎನ್.ಧರ್ಮಾಯತ್ ಸ್ವಾಗತಿಸಿದರು. ಸಂಘದ ಅಧ್ಯಕ್ಷ ಎನ್.ಸಿ.ಹವಾಲ್ದಾರ್ ಪ್ರಾಸ್ತಾವಿಕ ಭಾಷಣ ಮಾಡಿದರು.
ಕು.ಹೆಚ್.ಕೆ.ಸಹನಾ ಮತ್ತು ಸೌಮ್ಯಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಪ್ರಾಚಾರ್ಯ ಸಂಘದ ಖಜಾಂಚಿ ಎನ್.ಎನ್.ಧರ್ಮಾಯತ್ ಸ್ವಾಗತಿಸಿದರು. ಸಂಘದ ಅಧ್ಯಕ್ಷ ಎನ್.ಸಿ.ಹವಾಲ್ದಾರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರಾಚಾರ್ಯ ನಾಗಲಿಂಗಸ್ವಾಮಿ ವಂದನೆ ಸಲ್ಲಿಸಿದರು. ಉಪನ್ಯಾಸಕ ಕರ್ಣಂ ವಾಸುದೇವ ಭಟ್ ನಿರೂಪಿಸಿದರು.

Filed in: Sports Tags: 

Get Updates

Share This Post

Related Posts

© 2023 PROUD TIMES : ಪ್ರೌಢ ವಿಜಯ. All rights reserved.