0

“ರಕ್ತದಾನ ಮಾಡಿ, ಜೀವ ಉಳಿಸಿ” -ವಿದ್ಯಾರ್ಥಿಗಳಿಗೆ ಸಿದ್ಧರಾಮೇಶ್ವರ ಕಿವಿಮಾತು

ದಿನಾಂಕ 19/5/2022. PDIT, Hosapete

ಜೀವ ರಕ್ಷಣೆಗೆ ಕಾರಣವಾಗುವ ರಕ್ತದಾನದಂತಹ ಮಹತ್ತರ ಕಾರ್ಯದಲ್ಲಿ ವಿದ್ಯಾರ್ಥಿಗಳು ಭಾಗಿಯಾಗಬೇಕು ಎಂದು ಹೊಸಪೇಟೆಯ ಸಹಾಯಕ ಆಯುಕ್ತ ಸಿದ್ಧರಾಮೇಶ್ವರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಎನ್.ಎಸ್.ಎಸ್. ಹಾಗೂ ರೆಡ್ ಕ್ರಾಸ್ ಘಟಕಗಳು ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಿಜಯನಗರ ಜಿಲ್ಲಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ  ವಿಶ್ವ ರೆಡ್ ಕ್ರಾಸ್ ದಿನಾಚರಣೆಯ ನಿಮಿತ್ತ ಆಯೋಜಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಉದ್ಘಾಟನೆಯನ್ನು ಗುರುವಾರ ೧೯ರಂದು ನೆರವೇರಿಸಿ ಅವರು ಮಾತನಾಡುತ್ತಿದ್ದರು.

ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜೊತೆಯಲ್ಲಿ ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಬೇಕು, ಜವಾಬ್ದಾರಿಯುತ ಪ್ರಜೆಗಳಾಗಿ ರೂಪುಗೊಳ್ಳಬೇಕು; ಈ ದಿಸೆಯಲ್ಲಿ ಹೊಸಪೇಟೆ ನಗರದ ಸಂಘ ಸಂಸ್ಥೆಗಳು ಉತ್ತಮ ಕಾರ್ಯ ಮಾಡುತ್ತಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಹೊಸಪೇಟೆಯ ವೈದ್ಯರಾದ ಡಾ.ಸೋಮಶೇಖರ್ ಮಾತನಾಡಿ “೧೮ರಿಂದ ೬೦ ವರ್ಷ ಒಳಗಿನ, ಮಾನಸಿಕ, ದೈಹಿಕ ಸದೃಢ ಹೊಂದಿದ ೫೦ ಕೆ.ಜಿ. ತೂಕದ ವ್ಯಕ್ತಿಗಳು ರಕ್ತದಾನ ಮಾಡಲು ಅರ್ಹರು. ಆರೋಗ್ಯವಂತ ಮನುಷ್ಯನ ದೇಹದಲ್ಲಿ ೫ರಿಂದ ೬ಲೀಟರ್ ರಕ್ತ ಇರುತ್ತದೆ. ಇದರಲ್ಲಿ ಕೇವಲ ೩೫೦ ಮಿ.ಲೀ. ಮಾತ್ರ ರಕ್ತ ಪಡೆಯಲಾಗುವುದು. ದೇಶಾದ್ಯಂತ ಪ್ರತಿ ೨ ಸೆಕೆಂಡಿಗೆ ಒಬ್ಬರಂತೆ ರಕ್ತದ ಅವಶ್ಯಕತೆ ಇದೆ. ರಕ್ತದಾನದಿಂದ ಜೀವ ಉಳಿಸಬಹುದಾಗಿದ್ದು ಇದು ಶ್ರೇಷ್ಠ ದಾನವಾಗಿದೆ” ಎಂದು ಹೇಳಿದರು.

ಪಿಡಿಐಟಿಯ ಪ್ರಾಂಶುಪಾಲ ಡಾ.ಎಸ್.ಎಂ.ಶಶಿಧರ್ ಮಾತನಾಡಿ ರಕ್ತಕ್ಕೆ ಬೇರೆ ಪರ್ಯಾಯವಿಲ್ಲ. ವೈದ್ಯಲೋಕ ಸಾಕಷ್ಟು ಮುಂದುವರಿದಿದ್ದು, ಕೃತಕ ಅಂಗಾಂಗಗಳನ್ನು ಕಸಿ ಮಾಡಿಯೂ ಆಗಿದೆ. ಆದರೆ ಕೃತಕ ರಕ್ತ ಸೃಷ್ಟಿ ಸಾಧ್ಯವಾಗಿಲ್ಲ. ಎಷ್ಟೇ ಕೋಟಿ ಕೊಟ್ಟರೂ ರಕ್ತ ಸೃಷ್ಟಿ ಮಾಡಲಾಗುವುದಿಲ್ಲ. ಹೀಗಾಗಿ ರಕ್ತದಾನದ ಮೂಲಕ ಮಾತ್ರ ಬೇಡಿಕೆಯನ್ನು ಪೂರೈಸಬಹುದು. ಈ ನಿಟ್ಟಿನಲ್ಲಿ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರೆ, ಮಾನವೀಯ ಸಮಾಜ ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ ರಾವ್, ಉಪಾಧ್ಯಕ್ಷ ರವಿಶಂಕರ್, ಕಾರ್ಯದರ್ಶಿ ಅನ್ನಪೂರ್ಣ ಸದಾಶಿವ, ಸದಸ್ಯರಾದ ಕೊಟ್ರಪ್ಪ, ಶಮಿತಾ, ಬಿಂದು  ಮುಂತಾದವರು ಉಪಸ್ಥಿತರಿದ್ದರು.

ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ರೆಡ್ ಕ್ರಾಸ್ ಘಟಕದ ಸಂಯೋಜಕ ಎಸ್. ನವೀನ್ ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಸಂಯೋಜಕ ಆರ್. ನವೀನ್ ವಂದನಾರ್ಪಣೆ ಸಲ್ಲಿಸಿದರು. ಕು.ಶ್ರಾವಣಿ ನಿರೂಪಣೆ ಮಾಡಿದರು. ಶಿಬಿರದಲ್ಲಿ ೬೦ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ರಕ್ತದಾನ ಮಾಡಿದರು.

Filed in: Sports Tags: 

Get Updates

Share This Post

Related Posts

© 2022 PROUD TIMES : ಪ್ರೌಢ ವಿಜಯ. All rights reserved.