13-01-2022; ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾ
ಮಗುವಿನ ಗರ್ಭಾವಸ್ಥೆಯಿಂದ ಹಿಡಿದು ಮಾನವನ ಜೀವನದ ಪ್ರತೀ ಹಂತದಲ್ಲಿಯೂ ಕಾನೂನಿನ ಬಗ್ಗೆ ತಿಳುವಳಿಕೆಯ ಅವಶ್ಯಕತೆ ಇದೆ ಎಂದು ಹೊಸಪೇಟೆಯ ಗೌರವಾನ್ವಿತ ಜಿಲ್ಲಾ ನ್ಯಾಯಾಧೀಶ ಶುಭವೀರ್ ಜೈನ್ ರವರು ಅಭಿಪ್ರಾಯ ಪಟ್ಟರು.
ಅವರು ಹೊಸಪೇಟೆಯ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಯುವ ಸಪ್ತಾಹ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ ೧೩-೧-೨೦೨೨ ಗುರುವಾರದಂದು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾನೂನು ಸೇವಾಸಮಿತಿಯು ಯಾವುದೇ ನಾಗರೀಕರಿಗೆ ಉಚಿತವಾಗಿ ಕಾನೂನು ಸಲಹೆಗಳನ್ನು ಒದಗಿಸುವಲ್ಲಿ ಹಾಗೂ ಆರ್ಥಿಕ ಹಾಗೂ ಸಾಮಾಜಿಕ ಬೆಂಬಲವಿಲ್ಲದವರಿಗೆ ನ್ಯಾಯವಾದಿಗಳನ್ನು ಉಚಿತವಾಗಿ ನೇಮಿಸಿ ಸಹಾಯ ಮಾಡುತ್ತದೆ. ಇದರ ಅರಿವನ್ನು ಯುವ ಜನರು ತಿಳಿದು ಸಮಾಜಕ್ಕೂ ಅರಿವು ಮೂಡಿಸಲು ನೆರವಾಗಬೇಕು. ಲೋಕ ಅದಾಲತ್ ವ್ಯವಸ್ಥೆಯಲ್ಲಿ ರಾಜಿ ಸಂಧಾನದ ಮೂಲಕ ಹಲವಾರು ಪ್ರಕರಣಗಳನ್ನು ಬಗೆಹರಿಸಬಹುದಾಗಿದೆ ಎಂದು ತಿಳಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಪದ್ಮ ಪ್ರಸಾದ್ ಮಾತನಾಡಿ ವಿವೇಕಾನಂದರ ಸಂದೇಶದಂತೆ ಯುವಕರಲ್ಲಿ ಪ್ರಶ್ನಿಸುವ ಮನೋಭಾವ ಬಂದಾಗ ಸಮಾಜದ ಬದಲಾವಣೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಎರಡನೇ ಅಪರ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶ ಜಿ.ಸಂಜೀವ್ ಕುಮಾರ್ ಮಾತನಾಡಿ ದೇಶವನ್ನು ಮುನ್ನಡೆಸಲು ಸಶಕ್ತವಾದ ಯುವಪಡೆಯನ್ನು ನಿರ್ಮಿಸುವುದೇ ನನ್ನ ಗುರಿ ಎನ್ನುತ್ತಿದ್ದ ವಿವೇಕಾನಂದರು ಮಾನಸಿಕ, ದೈಹಿಕ, ಅಧ್ಯಾತ್ಮಿಕ, ನೈತಿಕವಾಗಿ ಶಕ್ತಿವಂತರಾಗಬೇಕೆಂದು ಯುವಕರಿಗೆ ಬೋಧಿಸುತ್ತಿದ್ದರು ಎಂದು ಹೇಳಿದರು.
ನ್ಯಾಯವಾದಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಎ. ಕರುಣಾನಿಧಿ, ಪಿಡಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಪಲ್ಲೇದ ದೊಡ್ಡಪ್ಪ ಮಾತನಾಡಿದರು. ಪಿಡಿಐಟಿ ಪ್ರಾಚಾರ್ಯ ಡಾ.ಎಸ್.ಎಂ.ಶಶಿಧರ್ ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣ ಮಾಡಿದರು. ವಿದ್ಯಾರ್ಥಿ ಶ್ರೇಯಸ್ ವಿವೇಕಾನಂದರ ಬದುಕು-ಕೊಡುಗೆಗಳ ಕುರಿತು ಭಾಷಣ ಮಾಡಿದರು. ವಿದ್ಯಾರ್ಥಿಗಳೊಂದಿಗೆ ನ್ಯಾಯಾಧೀಶರು ಸಂವಾದ ನಡೆಸಿ ಕಾನೂನು ಬಗ್ಗೆ ಜಾಗೃತಿ ಮೂಡಿಸಿದರು. ವಿದ್ಯಾರ್ಥಿಗಳು ಕೋವಿಡ್ ನಿಯಮಾನುಸಾರ ಸಭೆಯಲ್ಲಿ ಪಾಲ್ಗೊಂಡರು. ಕು.ಶ್ರಾವಣಿ ಕಾರ್ಯಕ್ರಮ ನಿರೂಪಿಸಿದರು. ಕು.ಸೌಮ್ಯ, ಕು.ಸಂಗೀತ ಹಾಗೂ ಕು.ಸಹನಾ ಪ್ರಾರ್ಥನೆ ಗೀತೆಯನ್ನು ಹಾಡಿದರು. ಪ್ರೊ. ಆರ್. ಬಸವರಾಜ್ ವಂದಿಸಿದರು. ಕಾರ್ಯಕ್ರಮದಲ್ಲಿ ದೀಪ ಬೆಳಗಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ಸಭೆಯಲ್ಲಿ ಹೊಸಪೇಟೆಯ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಕೆ. ವಿ. ಬಸವರಾಜ್, ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಎಸ್. ಪ್ರಕಾಶ್, ವಿವಿಧ ವಿಭಾಗದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.