ಹಿಂದುಳಿದ ಕಲ್ಯಾಣ ಕರ್ನಾಟಕದ ಸಮಗ್ರ ಕೈಗಾರಿಕಾ ಅಭಿವೃದ್ಧಿಗೆ ಬದ್ಧ ಎಂದು ಬೃಹತ್ ಮತ್ತು ಮಾಧ್ಯಮ ಕೈಗಾರಿಕೆ ಸಚಿವರು ಆದ ಡಾ. ಮುರುಗೇಶ್ ಆರ್. ನಿರಾಣಿ ಅವರು ಹೇಳಿದರು.
ದಿನಾಂಕ ೩-೧-೨೦೨೨ ರಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಕಲ್ಯಾಣ ಕರ್ನಾಟಕ ವಿಭಾಗದ ಕಾಲೇಜುಗಳಿಗೆ “ಉದ್ಯಮಿಯಾಗು, ಉದ್ಯೋಗ ನೀಡು” ಎಂಬ ಕಾರ್ಯಾಗಾರದ ಉದ್ಘಾಟನೆಯನ್ನು ಗುಲ್ಬರ್ಗ ವಿಶ್ವವಿದ್ಯಾಲಯ ಕಲ್ಬುರ್ಗಿಯಲ್ಲಿ ವರ್ಚುಯಲ್ ಮುಖಾಂತರ ನೆರವೇರಿಸಿ ಮಾತನಾಡುತ್ತಿದ್ದರು.
ಮುಂದುವರೆದು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಆರ್ಥಿಕವಾಗಿ ಹಿಂದುಳಿದ ಉದ್ಯಮಿ ಶೀಲರಿಗೆ ಕೈಗಾರಿಕಾ ಭೂಮಿ ಖರೀದಿಯಲ್ಲಿ ಶೇಕಡಾ ೭೫ ರಷ್ಟು ಸಬ್ಸಿಡಿ ಹಾಗೂ ಸಾಲ ಸೌಲಭ್ಯಗಳನ್ನು ಒದಗಿಸಲಾಗುವುದು. ಕೈಗಾರಿಕಾ ಬಂಡವಾಳದ ಮೇಲೆ ಶೇಕಡಾ ೩೦ ರಷ್ಟು ವಿನಾಯಿತಿ ವಿಸ್ತರಿಸಲಾಗುವುದು. ಮಹಿಳಾ ಉದ್ಯಮಿಗಳಿಗೆ ವಿಭಾಗವಾರು ರಿಯಾಯಿತಿ ಕೊಡಲಾಗುವುದು. ಕೈಗಾರಿಕೆಗೆ ಅನುಕೂಲವಾದ ಭೂ ಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸಿ ಉದ್ಯಮಿಶೀಲರಿಗೆ ಹಸ್ತಾಂತರಿಸಲಾಗುವುದು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತೀ ಹೆಚ್ಚು ಹತ್ತಿ ಬೆಳೆಯುವುದರಿಂದ ಟೆಕ್ಸ್ಟೈಲ್ ಹಬ್ (ಜವಳಿ ಕೇಂದ್ರ) ಸ್ಥಾಪಿಸಲು ೪೦% ರಿಯಾಯಿತಿ ನೀಡಲಾಗುವುದು. ಈ ಕಾರ್ಯಾಗಾರದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ತಿಂಗಳ ಕೌಶಲ್ಯ ತರಬೇತಿಗಳನ್ನು ನೀಡಿ ಉದ್ಯಮಿಯನ್ನಾಗಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಈ ಕಾರ್ಯಾಗಾರದಿಂದ ವಿದ್ಯಾರ್ಥಿಗಳು ಸ್ವತಂತ್ರ ಉದ್ಯೋಗವನ್ನು ಆರಂಭಿಸಲು ಮನಸು ಮಾಡಬೇಕು ಎಂದು ಕಿವಿಮಾತು ಹೇಳಿದರು.
ಉದ್ಘಾಟನೆ ಸಮಾರಂಭದ ನಂತರ ತಾಂತ್ರಿಕ ಉಪನ್ಯಾಸಗಳು ಜರಗಿದವು. ಯಶಸ್ವಿ ಉದ್ಯಮಿಗಳಾದ ಶ್ರೀಧರ್ ವಿ . ಷರಾಫ್, ಅಪೂರ್ವ ಬಜಾಜ್ , ವಿಕಾಸ್ ಬೋಳಶೆಟ್ಟಿ ಇವರು ಸಭೆಗೆ ಸ್ಪೂರ್ತಿದಾಯಕ ವಿಚಾರಗಳನ್ನು ಮಂಡಿಸಿದರು.
ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಸಂವಾದವನ್ನು ನಡೆಸಿದರು. ಅದರಲ್ಲಿ ಪಿ ಡಿ ಐ.ಟಿ. ಯ ಎಂ ಬಿ ಎ ವಿದ್ಯಾರ್ಥಿಯಾದ ಪರಶುರಾಮ್ ಪವಾರ್ ಐಟಿ ಉದ್ಯಮದ ಪ್ರಾರಂಭಿಸುವ ಬಗ್ಗೆ ಹಾಗೂ ಸಂಡೂರಿನ ಉದ್ಯಮಿ ಜಯಲಕ್ಷ್ಮಿ ಇವರು ಆಹಾರ ಉದ್ಯಮದ ವಿವರಗಳ ಬಗ್ಗೆ ಸಚಿವರಿಂದ ವಿವರಣೆ ಪಡೆದರು.
ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಈ ಕಾರ್ಯಕ್ರಮದ ನೇರ ಪ್ರಸಾರವನ್ನು ಕಲ್ಪಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ಹೊಸಪೇಟೆಯ ಪಿಡಿಐಟಿ, ಹಡಗಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಸರ್ಕಾರಿ ಪದವಿ ಕಾಲೇಜು ಹಗರಿಬೊಮ್ಮನಹಳ್ಳಿ ಹಾಗೂ ವಿಜಯನಗರ ಕಾಲೇಜು ಹೊಸಪೇಟೆಯ 400 ಕ್ಕೂ ಹೆಚ್ಚು ಇಂಜಿನಿಯರಿಂಗ್, ಪದವಿ ಹಾಗೂ ಎಂ ಬಿ ಎ ವಿದ್ಯಾರ್ಥಿಗಳು ಪಾಲ್ಗೊಂಡರು.
ಹೊಸಪೇಟೆಯಲ್ಲಿ ಕಾರ್ಯಾಗಾರದ ನೇರಪ್ರಸಾರದ ಹಾಗೂ ಸಂವಾದದಲ್ಲಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉಪನಿರ್ದೇಶಕರಾದ ಸಿ .ಕೆ ನಾಗರಾಜ್, ಪಿಡಿಐಟಿ ಪ್ರಾಂಶುಪಾಲರಾದ ಎಸ್. ಎಂ. ಶಶಿಧರ್, ವಿವಿಧ ಇಲಾಖೆಯ ಅಧಿಕಾರಿಗಳಾದ ಮೊಹಮ್ಮದ್ ತೌಸೀನ್, ಹೇಮಲತಾ , ಕೆ ಬಿ ಸೌಮ್ಯ , ಶ್ರೀಮತಿ ಚೈತ್ರ, ಫರೂಕ್ ಬಾದಾಮಿ, ಖುಶುಬು, ದೊಡ್ಡಬಸಪ್ಪ, ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಹಫೀಜ್ ಗಯಾಸುದ್ದೀನ್ ಹಾಗೂ ಮುಂತಾದ ಗಣ್ಯರು ಉಪಸ್ಥಿತರಿದ್ದರು.