ವಿಟಿಯು ವಲಯ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಪಡೆದಿರುವ ಪಿಡಿಐಟಿಯ ವಿದ್ಯಾರ್ಥಿಗಳ ತಂಡದೊಂದಿಗೆ ಕಾಲೇಜಿನ ಆಡಳಿತ ಮಂಡಳಿ ಆಧ್ಯಕ್ಷ ಪಲ್ಲೇದ ದೊಡ್ಡಪ್ಪ, ವಿಜಯನಗರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಅಸುಂಡಿ ನಾಗರಾಜ್, ಪ್ರಾಂಶುಪಾಲ ಡಾ ಎಸ್ಎಂ ಶಶಿಧರ್, ದೈಹಿಕ ಶಿಕ್ಷಣ ನಿರ್ದೇಶಕ ಕೆಎಸ್ ಮಂಜುನಾಥ್ ಮುಂತಾದವರು ಚಿತ್ರದಲ್ಲಿದ್ದಾರೆ.
ಹೊಸಪೇಟೆ 11 ಡಿಸಂಬರ್ 2021
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಲಬುರಗಿ ವಲಯ ಮಟ್ಟದ ಪುರುಷರ ಬಾಸ್ಕೆಟ್ ಬಾಲ್ ಪಂದ್ಯಾವಳಿಗಳು ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ದಿನಾಂಕ ೧೧ರಂದು ಜರುಗಿದವು. ಪಂದ್ಯಾವಳಿಯಲ್ಲಿ ಒಟ್ಟು ೭ ಇಂಜಿನಿಯರಿಂಗ್ ಕಾಲೇಜುಗಳ ತಂಡಗಳು ಭಾಗವಹಿಸಿದ್ದವು.
ಅಂತಿಮ ಸುತ್ತಿನ ಪಂದ್ಯದಲ್ಲಿ ಅತಿಥೇಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಬಾಗಲಕೋಟೆಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ತಂಡಗಳು ಮುಖಾಮುಖಿಯಾಗಿ ಸೆಣಸಿದವು. ಪಿಡಿಐಟಿ ತಂಡವು ೨೬-೨೪ ಅಂಕಗಳಿಂದ ರೋಚಕ ಗೆಲುವು ಗಳಿಸಿತು. ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ತಂಡ ದ್ವಿತೀಯ ಸ್ಥಾನ ಪಡೆಯಿತು. ಈ ಪಂದ್ಯದಲ್ಲಿ ಜಸ್ಟಿನ್, ರೇವಂತ್ ಮತ್ತು ವಿನೋದ್ ಅವರ ಆಕರ್ಷಕ ಆಟದ ನೆರವಿನಿಂದ ಪಿಡಿಐಟಿ ತಂಡವು ಮುನ್ನಡೆ ಸಾಧಿಸಿತು.
ಇದಕ್ಕೂ ಮುನ್ನ ಜರುಗಿದ ಸೆಮಿಫ಼ೈನಲ್ ಪಂದ್ಯದಲ್ಲಿ ಪಿಡಿಐಟಿ ತಂಡವು ವಿಜಯಪುರದ ಬಿ.ಎಲ್.ಡಿ.ಇ ಇಂಜಿನಿಯರಿಂಗ್ ಕಾಲೇಜಿನ ತಂಡವನ್ನು ಸೋಲಿಸಿ ಫ಼ೈನಲ್ಸ್ ಪ್ರವೇಶಿಸಿತ್ತು. ಬಳ್ಳಾರಿಯ ಆರ್.ವೈ.ಎಂ.ಇ.ಸಿ ಹಾಗೂ ಬಿ.ಐ.ಟಿ.ಎಂ. ಬೀದರಿನ ಜಿ.ಎನ್.ಡಿ. ಇಂಜಿನಿಯರಿಂಗ್ ಕಾಲೇಜು ಮತ್ತು ಕಲಬುರಗಿಯ ಪಿಡಿಎ ಇಂಜಿನಿಯರಿಂಗ್ ಕಾಲೇಜು ಭಾಗವಹಿಸಿದ್ದವು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿಜಯನಗರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಅಸುಂಡಿ ನಾಗರಾಜ ಅವರು ಭಾಗವಹಿಸಿದ್ದರು. ಪಿಡಿಐಟಿಯ ಆಡಳಿತ ಮಂಡಳಿಯ ಅಧ್ಯಕ್ಷ ಪಲ್ಲೇದ ದೊಡ್ಡಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ.ಎಸ್.ಎಂ.ಶಶಿಧರ್, ದೈಹಿಕ ನಿರ್ದೇಶಕ ಕೆ.ಎಸ್.ಮಂಜುನಾಥ್, ಕ್ರೀಡಾ ಸಂಚಾಲಕರಾದ ಎ.ಗಿರೀಶ್, ಡಾ.ಪ್ರಮೋದ್, ಪಿ.ವಿನಯ್ ಉಪಸ್ಥಿತರಿದ್ದರು