0

ಉದ್ಯಮಶೀಲತೆ ಯುವಜನತೆಯ ಆದ್ಯತೆಯಾಗಲಿ – ಶ್ರೀ ರಾಜಶೇಖರ್ ಪಟ್ಟಣಶೆಟ್ಟಿ, ಅಧ್ಯಕ್ಷರು ,ಜೆ . ಎಸ್. ಡಬ್ಲ್ಯೂ. ಸ್ಟೀಲ್ ವಿಜಯನಗರ ವರ್ಕ್ಸ್

ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪದವಿ ದಿನಾಚರಣೆ ಸಮಾರಂಭ

ದಿನಾಂಕ: 23/10/2021

“ಯುವಕರು ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯಮಶೀಲತೆಯತ್ತ ಹೆಜ್ಜೆ ಹಾಕಿದರೆ ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು. ಇದರಿಂದ ಸ್ವದೇಶೀ ವಸ್ತುಗಳ ಉತ್ಪಾದನೆಯ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಲಿದೆ” ಎಂದು ಜೆ. ಎಸ್. ಡಬ್ಲ್ಯೂ. ಸ್ಟೀಲ್ ವಿಜಯನಗರ ವರ್ಕ್ಸ್ ನ ಅಧ್ಯಕ್ಷರಾದ ರಾಜಶೇಖರ್ ಪಟ್ಟಣಶೆಟ್ಟಿ ತಾಂತ್ರಿಕ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿ 23 ಶನಿವಾರದಂದು ನಡೆದ ಪದವಿ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಜಗತ್ತಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಇದರಿಂದ ಹೆಚ್ಚಾಗುತ್ತಿರುವ ಜಾಗತಿಕ ಬೇಡಿಕೆ ಹಾಗೂ ಸಮಸ್ಯೆಗಳು ಇವತ್ತಿನ ಇಂಜನಿಯರಿಂಗ್ ವಿದ್ಯಾರ್ಥಿಗಳ ಮುಂದೆ ಸಾಕಷ್ಟು ಸವಾಲುಗಳನ್ನು ಹಾಗೂ ಅವಕಾಶಗಳನ್ನು ತೆರೆದಿಟ್ಟಿವೆ. ಸವಾಲುಗಳನ್ನು ಅವಕಾಶಗಳನ್ನಾಗಿ ಹಾಗೂ ಅವಕಾಶಗಳನ್ನ ಹೊಸ ಪರಿಹಾರ ಮತ್ತು ಪರಿಕರಗಳನ್ನಾಗಿ ಬದಲಾಯಿಸುವ ಶಕ್ತಿ ಯನ್ನು ಇಂಜನಿಯರಿಂಗ್ ವಿದ್ಯಾರ್ಥಿಗ ಳು ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಗುರುಸಿದ್ದಸ್ವಾಮಿ ಮಾತನಾಡಿ ವಿದ್ಯಾರ್ಥಿಗಳು ಶ್ರಮ ಪಡಬೇಕು. ಪ್ರರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಹೊಸಪೇಟೆಯ ಸುತ್ತ ಮುತ್ತಲಿನ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವಲ್ಲಿ ವೀ.ವಿ. ಸಂಘದ ಪಿಡಿಐಟಿಯು ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದರು. ರಾಷ್ಟೀಯ ಶಿಕ್ಷಣ ನೀತಿಯಲ್ಲಿ ಹೇಳಿದ ಮಾದರಿಯಿಂದ ವ್ಯಕ್ತಿ ವಿಕಸನ ಹಾಗೂ ವಿವಿಧ ವಿಷಯಗಳನ್ನು ಏಕಕಾಲಕ್ಕೆ ಕಲಿಯುವ ಅವಕಾಶ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿದೆ. ಈ ನಿಟ್ಟಿನಲ್ಲಿ ಅವಕಾಶಗಳನ್ನು ವಿದ್ಯಾರ್ಥಿಗಳನ್ನು ಸದುಪಯೋಗಪಡಿಸಿಕೊಳ್ಳಬೇಕು  ಎಂದು ಹೇಳಿದರು.

ಪಿಡಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಪಲ್ಲೇದ ದೊಡ್ಡಪ್ಪ ಮಾತನಾಡಿ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ನಿರ್ದಿಷ್ಟ ಗುರಿಯ ಕೊರತೆ ಎದ್ದು ಕಾಣುತ್ತಿದೆ. ವಿದ್ಯಾರ್ಥಿಗಳು ಯಾವುದೇ ಆಕರ್ಷಣೆಗೆ ಒಳಗಾಗದೆ ತಮ್ಮ ಗುರಿ ಸಾಧನೆಯತ್ತ ಪ್ರಯತ್ನ ನಡೆಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಸ್.ಎಂ. ಶಶಿಧರ್ ಇವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಅಧ್ಯಯನ ಎಂಬುದು ಒಂದು ನಿರಂತರವಾದ ಪ್ರಕ್ರಿಯೆಯಾಗಿದೆ ನಿರಂತರ ಅಧ್ಯನ ಹಾಗೂ ಕಠಿಣ ಪರಿಶ್ರಮ ನಮ್ಮ ಜೀವನದ ಯಶಸ್ಸಿನ ಕೀಲಿಕೈ. ಕಲಿಯುವಿಕೆಗೆ ಅಂತ್ಯ ಎಂಬುದು ಇಲ್ಲ ಅದೊಂದು ಮುಗಿಯದ ಜ್ಞಾನದ ಪಯಣವಾಗಿದೆ ಇಂದಿನ ಆಧುನಿಕ ತಂತ್ರಜ್ಞಾನದ ಕಾಲಘಟ್ಟದಲ್ಲಿ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯುವ ಕೌಶಲ್ಯ ನಮ್ಮಲ್ಲಿರಬೇಕು. ಪದವಿ ಪಡೆದ ನಂತರ ವಿದ್ಯಾರ್ಥಿಗಳು ಇರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಹೇಳಿದರು.

ಈ ಸಂದರ್ಭದಲ್ಲಿ ನೂತನ ಪದವಿಧರರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಗಣ್ಯರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳು ನೂತನ ಪದವಿಧರರೊಂದಿಗೆ ಸಂವಾದ ನಡೆಸಿದರು.

ಈ ಸಮಾರಂಭಕ್ಕೆ ವಿವಿಧ ತಾಂತ್ರಿಕ ವಿಭಾಗಗಳ ಮುಖ್ಯಸ್ಥರು, ಡೀನ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ಈ ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಮಾಲತೇಶ್ ಕೆ. ಉಪಸ್ಥಿತರಿದ್ದರು.

೫೦೦ ಕ್ಕೂ ಹೆಚ್ಚು ಬಿ.ಇ., ಎಂ.ಟೆಕ್., ಹಾಗೂ ಎಂ.ಬಿ.ಎ. ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರಗಳನ್ನು ಸ್ವೀಕರಿಸಿದರು ಹಾಗೂ ಅವರ ಪೋಷಕರು ಸಮಾರಂಭದಲ್ಲಿ ಭಾಗವಹಿಸಿದ್ದರು. ಕು. ಸಂಗೀತ ಹಾಗೂ ತಂಡದವರು ಪ್ರಾರ್ಥಿಸಿದರು, ಡಾ. ನಾಗರಾಜ್ ಎಂ.ಕೆ ವಂದಿಸಿದರು. ಪ್ರೊ. ರವಿಕುಮಾರ ಹಾಗೂ ಪ್ರೊ. ಪೂರ್ಣಿಮಾ. ಕೆ ಕಾರ್ಯಕ್ರಮವನ್ನು ನಿರೂಪಿಸಿದರು.

ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು.

           

Filed in: Activities, Events Tags: 

Get Updates

Share This Post

Related Posts

© 2023 PROUD TIMES : ಪ್ರೌಢ ವಿಜಯ. All rights reserved.