ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂದು ನಾವಿದ್ದೇವೆ. ಹೀಗಿರುವಾಗ ಕಲಿಕೆ ಎನ್ನುವುದು ಮಂದಗತಿಯ ಪ್ರಕ್ರಿಯೆ ಆಗಬಾರದು. ಈ ನಿಟ್ಟಿನಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವು (ಐಸಿಟಿ) ವಿದ್ಯಾರ್ಥಿಗಳು ಶೀಘ್ರ ಮತ್ತು ಪರಿಣಮಕಾರಿ ಕಲಿಕೆಗೆ ಪ್ರೇರಣೆ ನೀಡುತ್ತದೆ ಎಂದು ಹೊಸಪೇಟೆಯ ಎಸ್.ಬಿ.ಬಿ.ಎನ್.ಶಿಕ್ಷಣ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಬಾದಾಮಿ ಕರಿಬಸವರಾಜ ಹೇಳಿದರು.
ಅವರು ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬಿಎಡ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ೧೦ ದಿನಗಳ ಐಸಿಟಿ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಜಗತ್ತು ತಾಂತ್ರಿಕ ಓಟದೊಂದಿಗೆ ಪೈಪೋಟಿಯಲ್ಲಿದೆ. ಹೊಸ ಹೊಸ ತಂತ್ರಜ್ಞಾನಗಳ ಆವಿಷ್ಕಾರ, ಅನ್ವೇಷಣೆಗಳು ನಡೆಯುತ್ತಲೇ ಇವೆ. ಆನ್ಲೈನ್ ಜಗತ್ತಿನಲ್ಲಿಯೂ ಕ್ಷಿಪ್ರಗತಿಯ ಬೆಳವಣಿಗೆಗಳಾಗುತ್ತಿವೆ. ಈ ಎಲ್ಲ ಬೆಳವಣಿಗೆಗಳು, ಬದಲಾವಣೆಗಳು ಶಿಕ್ಷಣ ಕ್ಷೇತ್ರದ ಸ್ವರೂಪವನ್ನು ಅಗಾಧವಾಗಿ ಬದಲಿಸುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು.
ಪಿಡಿಐಟಿಯ ಆಡಳಿತ ಮಂಡಳಿ ಅಧ್ಯಕ್ಷ ದೊಡ್ಡಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು ಪಿಡಿಐಟಿಯ ಪ್ರಾಂಶುಪಾಲ ಡಾ ಎಸ್.ಎಂ. ಶಶಿಧರ್, ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ ವಿಶ್ವನಾಥ ಗೌಡ, ಕಾಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ ಪ್ರೊ ವಸಂತಮ್ಮ ಸಂಪನ್ಮೂಲ ವ್ಯಕ್ತಿಗಳಾದ ಮಾಲತೇಶ್, ಡಾ ವಿಜಯಕುಮಾರ್, ಇಂದಿರಾ, ತೇಜಸ್ವಿನಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ೮೭ ಪ್ರಶಿಕ್ಷಣಾರ್ಥಿಗಳು ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.