0

“ಹೊಸಪೇಟೆ ನಗರದ ಸ್ವಚ್ಛತೆಗೆ ಎಲ್ಲರೂ ಕೈಜೋಡಿಸಿ” -ಮನ್ಸೂರ್ ಅಲಿ, ಆಯುಕ್ತರು

ಹೊಸಪೇಟೆ ನಗರದ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡಿಕೊಳ್ಳಲು ನಗರದ ಪ್ರತಿಯೊಬ್ಬ ನಾಗರಿಕರೂ ಕೈಜೋಡಿಸಬೇಕು ಎಂದು ನಗರಸಭೆ ಆಯುಕ್ತ ಮನ್ಸೂರ್ ಅಲಿ ಕರೆ ನೀಡಿದರು.

‘ಸ್ವಚ್ಛ ನಗರ- ಹಸಿರು ನಗರ: ಹೊಸಪೇಟೆ’ ಕಾರ್ಯಕ್ರಮಕ್ಕೆ ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರಗಳ ಜಂಟಿ ಆಶ್ರಯದಲ್ಲಿ ದಿನಾಂಕ 5 ಆಗಸ್ಟ್ 2021, ಗುರುವಾರದಂದು ಹೂಡಾ ಪ್ರಾಧಿಕಾರದ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಮಹಾತ್ಮಾ ಗಾಂಧಿ “ಸ್ವಾತಂತ್ರ್ಯಕ್ಕಿಂತ ನೈರ್ಮಲ್ಯ ಮುಖ್ಯ” ಎಂದು ಹೇಳಿದರು. ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಗಾಂಧಿ ಜೀವನ ವಿಧಾನದ ಅವಿಭಾಜ್ಯ ಅಂಗವಾಗಿಸಿದ್ದರು. ದೈಹಿಕ ಯೋಗಕ್ಷೇಮ ಮತ್ತು ಆರೋಗ್ಯಕರ ವಾತಾವರಣಕ್ಕೆ ಸ್ವಚ್ಛತೆ ಅತಿ ಮುಖ್ಯ.
ಕೋವಿಡ್ ಸಾಂಕ್ರಾಮಿಕ ಪಿಡುಗಿನ ಈ ಸಂದರ್ಭದಲ್ಲಿ ನೈರ್ಮಲ್ಯದ ಪ್ರಾಮುಖ್ಯತೆ ಎಲ್ಲರಿಗೂ ಅರಿವಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ನೈರ್ಮಲ್ಯ, ನಗರದ ಸ್ವಚ್ಛತೆ ಬಹಳ ಮುಖ್ಯವಾಗಿದೆ. ಸ್ವಚ್ಛತೆ ಮತ್ತು ನೈರ್ಮಲ್ಯದ ಬಗ್ಗೆ ಜನಜಾಗೃತಿ ಮೂಡಿಸುವಲ್ಲಿ ಪಿಡಿಐಟಿಯ ವಿದ್ಯಾರ್ಥಿಗಳು ಮುಂದಾಗಿರುವುದು ಸ್ತುತ್ಯಾರ್ಹ ಕೆಲಸವಾಗಿದೆ ಎಂದು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಮಾತನಾಡಿದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಎಂ.ಶಶಿಧರ್ ತಾಂತ್ರಿಕ ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುಗಳಾಗಬಾರದು. ಸಾಮಾಜಿಕ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಪರಿಹಾರ ಒದಗಿಸುವುದು ತಂತ್ರಜ್ಞಾನದ ಮುಖ್ಯ ಧ್ಯೇಯವಾಗಿದೆ. ಈ ಉದ್ದೇಶಕ್ಕಾಗಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಂಸ್ಥೆಯು ಬಿಇ ಪದವಿ ಪಡೆಯಲು ನಾಲ್ಕು ವರ್ಷಗಳಲ್ಲಿ ಸುಮಾರು ನಾಲ್ಕು ನೂರು ಗಂಟೆಗಳ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದನ್ನು ಕಡ್ಡಾಯಗೊಳಿಸಿದೆ. ಹೊಸಪೇಟೆ ನಗರದ ಒಂದು ಪ್ರದೇಶವನ್ನು ದತ್ತು ಪಡೆದು, ಆ ಭಾಗದ ಸ್ವಚ್ಛತೆಯ ಹೊಣೆಯನ್ನು ಪಿಡಿಐಟಿಯ ವಿದ್ಯಾರ್ಥಿಗಳು ವಹಿಸಲಿದ್ದಾರೆ; ಆ ಭಾಗದ ನಾಗರೀಕರಲ್ಲಿ ನಾಗರೀಕ ಸೌಲಭ್ಯಗಳ ಬಗ್ಗೆ, ನೈರ್ಮಲ್ಯದ ಬಗ್ಗೆ, ನೂತನ ತಾಂತ್ರಿಕತೆ ಬಗ್ಗೆ ನಿರಂತರ ಜಾಗೃತಿ ಮೂಡಿಸಲಿದ್ದಾರೆ ಎಂದು ಶಶಿಧರ್ ಹೇಳಿದರು.

ಸಮಾರಂಭದಲ್ಲಿ ಆರೋಗ್ಯಾಧಿಕಾರಿ ವೆಂಕಟೇಶ್ ಕುಮಾರ್, ಎಂಜಿನಿಯರ್ ತೇಜಸ್ವಿನಿ, ಪಿಡಿಐಟಿಯ ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ಶಿವಕೇಶವ ಕುಮಾರ್, ಅಧ್ಯಾಪಕರಾದ ಪ್ರಶಾಂತ್, ಬಸವರಾಜ್ ಆರ್, ರಜನಿ, ವೇದಾ, ಲೋಕೇಶ್ ಹಾಗೂ ವಿದ್ಯಾರ್ಥಿಗಳಾದ ಶ್ರೇಯಸ್ ಸೊಲ್ಲಾಪುರ, ಅಮೃತಾ ಕೊಟ್ಟೂರು, ಅಖೀವ್ ಜಾವೀದ್, ಆಕಾಶ್, ಮಣಿಕಂಠ, ಇತೇಂದ್ರ, ಪ್ರಮೋದ್ ಮುಂತಾದವರು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ನಂತರ ಹೂಡಾ ವೃತ್ತದ ಬಳಿ ಹಾಗೂ ಮುನಿಸಿಪಲ್ ಮೈದಾನದಲ್ಲಿ ೬೦ಕ್ಕೂ ಹೆಚ್ಛು ವಿದ್ಯಾರ್ಥಿಗಳು ಸ್ವಚ್ಛತೆಯ ಚಟುವಟಿಕೆಯಲ್ಲಿ ಪಾಲ್ಗೊಂಡರು.

 

Filed in: Activities, CIVIL, Events Tags: 

Get Updates

Share This Post

Related Posts

© 2021 PROUD TIMES : ಪ್ರೌಢ ವಿಜಯ. All rights reserved.