0

ಪಿಡಿಐಟಿಯಲ್ಲಿ ‘ರಾಗ ಭೈರವಿ’ ಪ್ರೀಮಿಯರ್ ಚಿತ್ರಪ್ರದರ್ಶನ “ಅಳಿಸುವ-ನಗಿಸುವ ಶಕ್ತಿ ಸಿನಿಮಾಗೆ ಇದೆ” -ಎಸ್. ವೆಂಕಟೇಶ್ ಕೊಟ್ಟೂರು

ಹೊಸಪೇಟೆಯ ಸಂಗೀತ-ಭಾರತಿ , ಪಿಡಿಐಟಿ ಹಾಗೂ ಇತರ ಸಂಘ ಸಂಸ್ಥೆಗಳ ಪರವಾಗಿ ಚಿತ್ರದ ನಿರ್ದೇಶಕ ಎಸ್ ವೆಂಕಟೇಶ್ ಕೊಟ್ಟೂರು ಹಾಗೂ ನಿರ್ಮಾಪಕ ಸಾ. ಹರೀಶ್ ಅವರನ್ನು ಸನ್ಮಾನಿಸಲಾಯಿತು.

Date: 7 -2-2021 Sunday

 “ಅಳಿಸುವ ನಗಿಸುವ ಶಕ್ತಿ ಸಿನಿಮಾಗೆ ಇದೆ. ಪ್ರೇಕ್ಷಕರನ್ನು ಭಾವನಾತ್ಮಕವಾಗಿ ತೊಡಗಿಸಿಕೊಳ್ಳುವ ಜೊತೆಗೆ ಉತ್ತಮ ಸಂದೇಶ ಸಾರುವ ಚಿತ್ರಗಳು ಹೆಚ್ಚು ಬರಬೇಕು” ಎಂದು ಕಿರುತೆರೆಯ ನಿರ್ದೇಶಕ ಕೊಟ್ಟೂರಿನ ಎಸ್. ವೆಂಕಟೇಶ್ ಕೊಟ್ಟೂರು ಹೇಳಿದರು.

ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿ 6ರಂದು ಶನಿವಾರ ಸಂಜೆ ಏರ್ಪಡಿಸಲಾಗಿದ್ದ ತಮ್ಮ ನಿರ್ದೇಶನದ ‘ರಾಗ ಭೈರವಿ’ ಕನ್ನಡ ಸಂಗೀತ ಪ್ರಧಾನ ಚಲನಚಿತ್ರದ ಪ್ರೀಮಿಯರ್ ಪ್ರದರ್ಶನದ ನಂತರ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು.

 “ಚಿತ್ರ ನಿರ್ದೇಶಕನಾಗಲು ಪುಟ್ಟಣ ಕಣಗಾಲ್, ಕೆ.ವಿಶ್ವನಾಥ್ ಹಾಗೂ ಬಾಲಚಂದರ್ ಸ್ಫೂರ್ತಿಯಾದರು. ಡಾ. ರಾಜ್ ಕುಮಾರ್, ಎನ್ಟಿಆರ್, ಅಮಿತಾಭ್ ಬಚ್ಚನ್ ಅವರ ಸಿನಿಮಾಗಳು ನನ್ನ ಮೇಲೆ ಪ್ರಭಾವ ಬೀರಿದವು. ಬಳ್ಳಾರಿ ಜಿಲ್ಲೆಯವನಾದ ನನ್ನ ಚಿತ್ರದ ಪ್ರೀಮಿಯರ್ ಪ್ರದರ್ಶನ ಹೊಸಪೇಟೆಯಲ್ಲಿ ನಡೆದಿರುವುದು ಖುಷಿ ತಂದಿದೆ. ಭವ್ಯವಾದ ಸಂಸ್ಕೃತಿ ಪರಂಪರೆ ಹೊಂದಿರುವ ಹೊಸಪೇಟೆ ಕಲಾವಿದರ ತವರೂರು” ಎಂದು ವೆಂಕಟೇಶ್ ಕೊಟ್ಟೂರು ನುಡಿದರು.

 “ಹೊಸಪೇಟೆ ಕಲಾವಿದರ ಕಲಾ ಪೋಷಕರ ನಾಡು ಎಂದು ಕೇಳಿದ್ದೆ. ಇಲ್ಲಿಗೆ ಬಂದು ನೋಡಿದಾಗ ಆ ಮಾತು ಅದೆಷ್ಟು ಸತ್ಯ ಎಂಬುದು ಮನವರಿಕೆಯಾಯಿತು. ಅಂದು ವಿಜಯನಗರ ಸಾಮ್ರಾಜ್ಯದ ದೊರೆಗಳಾದ ಪ್ರೌಢದೇವರಾಯ, ಶ್ರೀ ಕೃಷ್ಣದೇವರಾಯ  ಕಲೆ ಸಾಹಿತ್ಯ ಸಂಗೀತ ನೃತ್ಯಗಳಿಗೆ ನೀಡಿದ ಪ್ರೋತ್ಸಾಹ ಇಂದಿಗೂ ಮುಂದುವರೆದಿದೆ” ಎಂದು ರಾಗ ಭೈರವಿ ಚಿತ್ರದ ನಿರ್ಮಾಪಕ, ಹಿರಿಯ ಚಿತ್ರ ಕಥಾ ಲೇಖಕ ಸಾ.ಹರೀಶ್ ಕೃತಜ್ಞತೆ ವ್ಯಕ್ತಪಡಿಸಿದರು.

 “ಹಿಂದೂಸ್ತಾನಿ ಸಂಗೀತದ ಹತ್ತು ಗೀತೆಗಳನ್ನು ಅಳವಡಿಸಿ ಕಥೆಯನ್ನು ಹೆಣೆಯಲಾಗಿದೆ; ಇದೊಂದು ಸವಾಲಿನ ಕೆಲಸ. ಇದರಲ್ಲಿ ಚಿತ್ರತಂಡ ಅತ್ಯಂತ ಯಶಸ್ವಿಯಾಗಿದೆ, ಚಿತ್ರದಲ್ಲಿ ಕತೆ ಹಾಗೂ ಸಂಗೀತ ಮೇಳೈಸಿವೆ. ಸಂಗೀತಕ್ಕೆ ನೋವನ್ನು ಶಮನಗೊಳಿಸುವ ಶಕ್ತಿಯಿದೆ ಎಂಬುದನ್ನು ಚಿತ್ರ ಸಾರುತ್ತದೆ” ಎಂದು ಹೊಸಪೇಟೆಯ ಸಂಗೀತ-ಭಾರತಿ ಸಂಸ್ಥೆಯ ಎಚ್.ಪಿ.ಕಲ್ಲಂಭಟ್  ಅಭಿಪ್ರಾಯಪಟ್ಟರು.

 “ಪ್ರವರ್ಧಮಾನಕ್ಕೆ ಬರುತ್ತಿರುವ ಹಿಂದುಸ್ತಾನಿ ಗಾಯಕಿಯೊಬ್ಬಳ ಬದುಕನ್ನು ಕಟ್ಟಿಕೊಡುವ ‘ರಾಗ ಭೈರವಿ’ ಸದಭಿರುಚಿಯ ಚಿತ್ರ. ಬಸವಣ್ಣ, ಅಲ್ಲಮಪ್ರಭು ವಚನಗಳನ್ನು ಅಳವಡಿಸಿಕೊಂಡಿರುವುದು ಚಿತ್ರಕ್ಕೆ ಮೆರುಗು ನೀಡಿದೆ” ಎಂದು ಪಿಡಿಐಟಿಯ ಪ್ರಾಂಶುಪಾಲ ಡಾ. ಎಸ್.ಎಂ.ಶಶಿಧರ್ ಅಭಿಪ್ರಾಯ ವ್ಯಕ್ತಪಡಿಸಿದರು.

 “ಈ ಚಿತ್ರದಲ್ಲಿ ಹೆಚ್ಚು ಮಾತುಗಳಿಲ್ಲ; ಸಂಗೀತವೇ ಮಾತನಾಡುತ್ತದೆ. ಇದೊಂದು ಘನತೆಯ ಸಿನಿಮಾ. ಸಂಗೀತ ಪ್ರೀತಿಸುವವನು ಹೃದಯವಂತ ಮನುಷ್ಯನಾಗಿರುತ್ತಾನೆ” ಎಂಬುದು ಚಿತ್ರದಲ್ಲಿ ಬಿಂಬಿತವಾಗಿದೆ ಎಂದು ಡಾ.ಪಲ್ಲವ ವೆಂಕಟೇಶ್ ಅಭಿಪ್ರಾಯಪಟ್ಟರು. “ಚಿತ್ರ ನೋಡುತ್ತಾ ನಾನು ಭಾವಪರವಶಳಾದೆ. ಡಾ ಜಯದೇವಿ ಜಂಗಮಶೆಟ್ಟಿ ಅವರ ಸಂಗೀತ, ಗಾಯನ ನನ್ನನ್ನು ಬೇರೊಂದು  ಲೋಕಕ್ಕೆ ಕರೆದೊಯ್ದಿತು ಚಿತ್ರ ಮಹತ್ತರ ಸಂದೇಶವೊಂದನ್ನು ಸಾರುತ್ತಿದೆ. ಖಿನ್ನತೆಗೊಳಗಾದವರಿಗೆ ಜೀವನಪ್ರೀತಿ ಮತ್ತು ಬದುಕುವ ಭರವಸೆಯನ್ನು ಕೊಡುವಂತಿದೆ” ಎಂದು ಹಿರಿಯ ರಂಗ ಕಲಾವಿದೆ ಡಾ. ಕೆ. ನಾಗರತ್ನಮ್ಮ ಅಭಿಪ್ರಾಯಪಟ್ಟರು.  “ಸಿನಿಮಾದಲ್ಲಿ ಹಿಂದುಸ್ತಾನಿ ಸಂಗೀತದ  ರಸದೌತಣವಿದೆ” ಎಂದು ಹೊಸಪೇಟೆಯ ಹಿರಿಯ ಸಂಗೀತ ನಿರ್ದೇಶಕ ಚಾರುಚಂದ್ರ  ಅವರು ತಿಳಿಸಿದರು.

 ಇದೇ ಸಂದರ್ಭದಲ್ಲಿ ಹೊಸಪೇಟೆಯ ಸಂಗೀತ-ಭಾರತಿ , ಪಿಡಿಐಟಿ ಹಾಗೂ ಇತರ ಸಂಘ ಸಂಸ್ಥೆಗಳ ಪರವಾಗಿ ಚಿತ್ರದ ನಿರ್ದೇಶಕ ಎಸ್ ವೆಂಕಟೇಶ್ ಕೊಟ್ಟೂರು ಹಾಗೂ ನಿರ್ಮಾಪಕ ಸಾ. ಹರೀಶ್ ಅವರನ್ನು ಸನ್ಮಾನಿಸಲಾಯಿತು.   ಡಾ.ತಾರಿಹಳ್ಳಿ ವೆಂಕಟೇಶ್, ಭಾನುಮತಿ, ವಿಜಯಚಂದ್ರ, ನೂರ್ ಮೊಹಮದ್, ಉಪನ್ಯಾಸಕರಾದ ಎಚ್.ಎಂ. ನಿರಂಜನ, ದಿವಾಕರ್, ಹಿರಿಯ ವೈದ್ಯ ಡಾ ಮಹಾಬಲೇಶ್ವರ ರೆಡ್ಡಿ, ಕನ್ನಡ ಕಲಾ ಸಂಘದ ಚಂದ್ರಶೇಖರ್, ಬದರೀಶ್, ಕೆಂಚನಗೌಡ, ಸೊ.ದಾ.ವಿರುಪಾಕ್ಷಗೌಡ, ಡಾ ಅಬ್ದುಲ್ ಸಮದ್, ವೆಂಕನಗೌಡರು,  ಪೂರ್ಣಿಮ ಗುರುರಾಜ್, ಮಹಮದ್ ರಫಿ, ವೇಣುಗೋಪಾಲ ಮುಂತಾದವರು ಮಾತನಾಡಿದರು.

 

 

Filed in: Sports Tags: 

Get Updates

Share This Post

Related Posts

© 1284 PROUD TIMES : ಪ್ರೌಢ ವಿಜಯ. All rights reserved.