ಹೊಸಪೇಟೆ 26-08-2020
ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯವು ‘ಅತ್ಯುತ್ತಮ ಎಂಜಿನಿಯರಿಂಗ್ ಕಾಲೇಜು’ ಎಂಬ ಗೋಲ್ಡನ್ ಏಮ್ ಪ್ರಶಸ್ತಿಗೆ ಪಾತ್ರವಾಗಿದೆ. ಶಿಕ್ಷಣದಲ್ಲಿ ಶ್ರೇಷ್ಟತೆಗಾಗಿ ಮತ್ತು ಸಾಧನೆಗಾಗಿ ನೀಡುವ ಈ ಪ್ರಶಸ್ತಿಯನ್ನು ಇತ್ತೀಚೆಗೆ ಮುಂಬೈನಲ್ಲಿ ಡೈನರ್ಜಿಕ್ ಸೊಲ್ಯೂಶನ್ಸ್ ಸಂಸ್ಥೆಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪಿಡಿಐಟಿಗೆ ಪ್ರದಾನ ಮಾಡಲಾಯಿತು.
ನಾವೀನ್ಯತೆ, ಬೋಧನೆ-ಕಲಿಕೆ ಮತ್ತು ಅತ್ಯಾಧುನಿಕ ತರಬೇತಿ ಹಾಗೂ ನಿಯೋಜನೆಗಳ ಮೂಲಕ ಎಂಜಿನಿಯರಿಂಗ್ ಶಿಕ್ಷಣವನ್ನು ಉತ್ತೇಜಿಸುವಲ್ಲಿ ಪಿಡಿಐಟಿಯ ಮಹತ್ವದ ಕೊಡುಗೆಯನ್ನು ಪ್ರಶಸ್ತಿ ಗುರುತಿಸಿದೆ. “ಪಿಡಿಐಟಿಯ ಸಮರ್ಪಿತ ಮತ್ತು ಅರ್ಹ ಸಿಬ್ಬಂದಿ ಕ್ಯಾಂಪಸ್‌ನಲ್ಲಿ ಹೆಚ್ಚು ಶೈಕ್ಷಣಿಕ ವಾತಾವರಣವನ್ನು ಸೃಷ್ಟಿಸುವಲ್ಲಿ ತಮ್ಮ ಉತ್ಸಾಹವನ್ನು ತೋರಿದ್ದಾರೆ. ಪಿಡಿಐಟಿಯ ಕ್ಯಾಂಪಸ್‌ನಲ್ಲಿ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಬಳ್ಳಾರಿಯ ವಿ.ವಿ.ಸಂಘವು ಕೊಡುಗೆ ನೀಡಿದೆ” ಎಂದು ಪ್ರಶಸ್ತಿ ಫಲಕದಲ್ಲಿ ಉಲ್ಲೇಖಿಸಲಾಗಿದೆ.
“ಗೋಲ್ಡನ್ ಏಮ್ ಪ್ರಶಸ್ತಿಯ ಈ ಮಾನ್ಯತೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಎಂಜಿನಿಯರಿಂಗ್ ಶಿಕ್ಷಣವನ್ನು ಒದಗಿಸುವ ನಮ್ಮ ಪ್ರಯತ್ನಗಳ ಉತ್ತಮ ಮೌಲ್ಯಮಾಪನವಾಗಿದೆ ಮತ್ತು ಇದು ನಿಜಕ್ಕೂ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ” ಎಂದು ಪಿಡಿಐಟಿಯ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಜಾನೆಕುಂಟೆ ಬಸವರಾಜ್ ಹೇಳಿದರು.
ಡಾ.ಎಸ್.ಎಂ.ಶಶಿಧರ್; ಮೋಸ್ಟ್ ಅಡ್ಮೈರಬಲ್ ಪ್ರಿನ್ಸಿಪಾಲ್
ಇದೇ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎಂ.ಶಶಿಧರ್ ಅವರ ಸಾಧನೆ ಗೌರವಿಸಿ ’ಅತ್ಯಂತ ಪ್ರಶಂಸನೀಯ ಪ್ರಿನ್ಸಿಪಾಲ್’ ಪ್ರಶಸ್ತಿ ಪ್ರದಾನ ಮಾಡಲಾಯಿತು.
“ಶೈಕ್ಷಣಿಕ, ಮೂಲಸೌಕರ್ಯ, ಸೌಲಭ್ಯಗಳು, ಬೋಧನೆ-ಕಲಿಕೆಯ ಪ್ರಕ್ರಿಯೆ, ಪ್ಲೇಸ್ಮೆಂಟ್ ಯಶಸ್ಸಿನ ಉನ್ನತಿ ತಲುಪಲು ಪಿಡಿಐಟಿ ಪ್ರಯತ್ನಿಸುತ್ತಿದೆ”ಎಂದು ಪಿಡಿಐಟಿಯ ಪ್ರಾಂಶುಪಾಲ ಡಾ.ಎಸ್.ಎಂ.ಶಶಿಧರ್ ಈ ಸಮಾರಂಭದ ವೆಬಿನಾರ್ ಪ್ರಸಾರದಲ್ಲಿ ಹೇಳಿದರು.
ಈ ಸಾಧನೆಗಾಗಿ ಪಿಡಿಐಟಿಯ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಪ್ರಾಂಶುಪಾಲರನ್ನು ವಿ.ವಿ.ಸಂಘದ ಅಧ್ಯಕ್ಷ ಶ್ರೀ ಉಡೇದ ಬಸವರಾಜ್, ಕಾರ್ಯದರ್ಶಿ ಶ್ರೀ ಚೋರನೂರು ಕೊಟ್ರಪ್ಪ ಮತ್ತು ಇತರ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.