0

ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಿ ಯುವಜನತೆಗೆ ಕು. ಅಶ್ವಿಜಾ ಬಿ.ವಿ., ಐ.ಎ.ಎಸ್. ಕರೆ

ಮೊಬೈಲ್ ಹಾಗೂ ತಂತ್ರಜ್ಞಾನದ ಗೀಳಿನಿಂದಾಗಿ ಮಾನವೀಯ ಸಂಬಂಧಗಳು  ಜಾಳುಜಾಳಾಗುತ್ತಿದ್ದು, ಸಾಮಾಜಿಕ ಹಾಗೂ ಮಾನವೀಯ ಕಳಕಳಿ ಬೆಳೆಸಿಕೊಳ್ಳುವುದು ಹಿಂದೆಂದಿಗಿಂತ ಅವಶ್ಯವಾಗಿದೆ ಎಂದು ಐ ಎ ಎಸ್ ಟಾಪರ್ ಕು. ಅಶ್ವಿಜಾ ಬಿ.ವಿ. ಯುವಜನತೆಗೆ ಕರೆ ನೀಡಿದರು.

ಅವರು ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬುಧವಾರದಂದು ನಡೆದ ಪ್ರಥಮ ವರ್ಷದ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ ’ಶುಭಾರಂಭ’ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಆಡಳಿತ ಸೇವೆಗೆ ಸಾಮಾಜಿಕ ಕಳಕಳಿ ಅವಶ್ಯ, ಸಾಮಾಜಿಕ ಸಮಸ್ಯೆಗಳನ್ನು ಅರಿತು ಪರಿಹರಿಸಬೇಕಾದರೆ ಜನ-ಸಾಮಾನ್ಯರ ಜೊತೆಗಿನ ಸಂಪರ್ಕ ಅತ್ಯವಶ್ಯವಾದುದು ಹಾಗೂ ಸಮಸ್ಯೆಯ ಜಟಿಲತೆಯನ್ನು ಪರಿಹರಿಸುವಲ್ಲಿ ಇದು ಸಹಕಾರಿ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರಿನ ಮೆಟ್ರೋದಲ್ಲಿ ಬಸುರಿ ಹೆಂಗಸು ನಿಂತುಕೊಂಡು ಪ್ರಯಾಣಿಸುತ್ತಿದ್ದರೂ ಗಮನಿಸದೇ ಸೀಟು ಬಿಟ್ಟುಕೊಡದೆ ಮೊಬೈಲಿನಲ್ಲಿ ಮುಳುಗಿದ್ದ ಯುವಕರನ್ನು ತಾವು  ನೋಡಿದ್ದನ್ನು ಉದಾಹರಿಸಿದ ಅವರು ಮನುಷ್ಯ-ಮನುಷ್ಯರ ನಡುವೆ ಮಾನವೀಯ ಸಂಬಂಧ, ಸಂವೇದನೆಗಳು ಬೆಳೆಯಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾ ಅವರ ಹಲವಾರು ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದರು.

“ನನ್ನ ಮನಸ್ಸಿನಲ್ಲಿ ನಾಗರೀಕ ಸೇವೆಗೆ ಸೇರಬೇಕೆಂಬ ಮಹತ್ವಾಕಾಂಕ್ಷೆಯನ್ನು ನಾನು ಯಾವಾಗಲೂ ಹೊಂದಿದ್ದೆ, ನನ್ನ ತಂದೆ ಅದಕ್ಕೆ ಒತ್ತಾಸೆಯಾದರು, ನನ್ನ ಇಡೀ ಕುಟುಂಬ ನನ್ನ ಆಕಾಂಕ್ಷೆ ಈಡೇರಿಸಲು ಒಂದು ತಂಡವಾಗಿ ಬೆಂಬಲ ನೀಡಿತು ಎಂದು ಅವರು  ಹೇಳಿದರು.

ಕರ್ನಾಟಕದ ವಿದ್ಯಾರ್ಥಿಗಳಿಗೆ ಪದವಿಯ ನಂತರ ಯುಪಿಎಸ್‌ಸಿ ಪರೀಕ್ಷೆ ಹಾಗೂ ಅದರ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಬೇಕಾಗಿದೆ. ಬಿಹಾರದಲ್ಲಿ ಬೀದಿಗೊಬ್ಬರು ಐ.ಎ.ಎಸ್. ಮಾಡಿದವರಿರುತ್ತಾರೆ. ಕರ್ನಾಟಕಲ್ಲಿ ಶಿಕ್ಷಣ ಸಂಸ್ಥೆಗಳು ಈ ದಿಸೆಯಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮಾರ್ಗದರ್ಶನ ನೀಡಬೇಕು ಎಂದರು.ಮಹಾವಿದ್ಯಾಲಯ

ಸಾಮಾಜಿಕ ಕಳಕಳಿ ಬೆಳೆಸಿಕೊಳಿ

“ನಾಗರೀಕ ಸೇವೆಗೆ ಸೇರಲು ನೀವು ಬಲವಾದ ಪ್ರೇರಣೆ ಮತ್ತು ಬದ್ಧತೆಯನ್ನು ಹೊಂದಿರಬೇಕು. ಯುಪಿಎಸ್ಸಿ  ಪರೀಕ್ಷೆಗೆ ತಾಳ್ಮೆ, ಪರಿಶ್ರಮ ಮತ್ತು ಪರೀಕ್ಷೆಯನ್ನು ಹಲವಾರು ಬಾರಿ ತೆಗೆದುಕೊಳ್ಳುವ ನಿರಂತರ ಪ್ರಯತ್ನದಲ್ಲಿ ತೊಡಗಿಸಿಕೊಳ್ಳುವ ಸಾಮರ್ಥ್ಯ ಇರುವುದು ಮುಖ್ಯ. ಯಶಸ್ವಿಯಾಗುವವರೆಗೂ ನಿಮ್ಮ ತಯಾರಿಯ ಪ್ರಯಾಣವನ್ನು ನೀವು ಆನಂದಿಸಬೇಕು. ಈ ಪ್ರಯಾಣವು ನಿಮ್ಮ ದೃಷ್ಟಿಕೋನ ಮತ್ತು ಅನೇಕ  ವಿಷಯಗಳ ಗ್ರಹಿಕೆಗೆ ಕಾರಣವಾಗುತ್ತದೆ. ನೀವು ಪರೀಕ್ಷೆಯನ್ನು ಭೇದಿಸುವ ಹೊತ್ತಿಗೆ ನೀವು ಹೆಚ್ಚು ಅರಿವು, ಪ್ರಜ್ಞೆ ಪಡೆದಿರುವಿರಿ ಮತ್ತು ಪ್ರಬುದ್ಧರಾಗಿರುತ್ತೀರಿ”ಎಂದು ಅವರು ಅಭಿಪ್ರಾಯಪಟ್ಟರು.

ಕೇವಲ ಬುದ್ದಿವಂತಿಕೆಯಲ್ಲದೇ, ಕಠಿಣ ಪರಿಶ್ರಮ ಹಾಗೂ ಸಾಮಾನ್ಯ ಜ್ಞಾನ ಈ ಪರೀಕ್ಷೆಗಳ ಯಶಸ್ಸಿನಲ್ಲಿ ನೆರವಾಗುತ್ತವೆ. ಒಂದು ವಿಷಯವನ್ನು ವಿವಿಧ ಕೋನಗಳಲ್ಲಿ ನೋಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಮನೆಯಲ್ಲಿಯೇ ಪರೀಕ್ಷಾ ವಾತಾವರಣ ಸೃಷ್ಠಿ ಮಾಡಿದರೆ, ಪರೀಕ್ಷಾ ಭಯವನ್ನು ಹೋಗಲಾಡಿಸಲು ನೆರವಾಗುತ್ತದೆ. ಮನಸ್ಸು ಹಾಗೂ ದೇಹವನ್ನು ಅಧ್ಯಯನದಲ್ಲಿ ಸ್ಥಿರೀಕರಿಸಿ ಅಭ್ಯಾಸ ಮಾಡಿದರೆ ಯಶಸ್ಸು ದೊರೆಯುತ್ತದೆ. ಐಎಎಸ್ ಪರೀಕ್ಷೆಯು ಒಂದು ಪದವಿ ಶಿಕ್ಷಣವೆಂದು ಭಾವಿಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಗಂಟೆಗಟ್ಟಲೇ ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು.

ಹೆಣ್ಣುಮಕ್ಕಳನ್ನು ಪದವಿ ಮುಗಿಯುತ್ತಲೇ ಮದುವೆ ಮಾಡಿ ಕಳಿಸಬೇಕು ಎಂದು ಯೊಚಿಸದೇ ಅವರಲ್ಲೂ ಇರುವ ಮಹತ್ವಾಕಾಂಕ್ಷೆಗಳಿಗೆ ಪೋಷಕರು ನೀರೆರೆದು ಪೋಷಿಸಬೇಕು.

ದಿನಪತ್ರಿಕೆಗಳ ನಿರಂತರ ಓದು, ಸಂಗ್ರಹ ಅತ್ಯಮೂಲ್ಯ ಸಣ್ಣ ಸಣ್ಣ ಸಂಗತಿಗಳ ಬಗ್ಗೆ ವಿದ್ಯಾರ್ಥಿಗಳು ಗಮನವಿರಿಸಿಕೊಳ್ಳಬೇಕು. ವಿಷಯದ ಅಧ್ಯಯನದಲ್ಲಿ ವೈವಿಧ್ಯತೆ ಹಾಗೂ ಆಯ್ಕೆಯಲ್ಲಿ ವಿದ್ಯಾರ್ಥಿಗಳು ಎಚ್ಚರವಹಿಸಿದಲ್ಲಿ  ಮೌಖಿಕ ಪರೀಕ್ಷೆಗಳನ್ನು ಎದುರಿಸಲು ಅನುಕೂಲವಾಗುತ್ತದೆ.

ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ತಾಂತ್ರಿಕ ಪದವೀಧರರು ಹೆಚ್ಚಿನ ಯಶಸ್ಸು ಸಾಧಿಸಲು ಕಾರಣವೇನು? ಎಂಬ ಪ್ರಶ್ನೆಗೆ ತಾಂತ್ರಿಕ ಪದವಿ ಅಭ್ಯಾಸದಿಂದ ವಿಶ್ಲೇಷಣಾ ಸಾಮರ್ಥ್ಯ ಸಬಲಗೊಳ್ಳುತ್ತದೆ. ಅಲ್ಲದೇ ಗಣಿತದಲ್ಲಿ ಪರಿಣತಿಯೂ ಬೆಳೆಯುತ್ತದೆ. ಇವು ಯುಪಿಎಸ್‌ಸಿ ಪರೀಕ್ಷೆಗಳಿಗೆ ಹೆಚ್ಚು ಸಹಾಯಕವಾಗುವುದರಿಂದ ಹೆಚ್ಚಿನ ಯಶಸ್ಸು ಸಹಜ ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪಿ.ಡಿ.ಐ.ಟಿ. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಜಾನೇಕುಂಟೆ ಬಸವರಾಜ್ ಇವರು ಮಾತನಾಡಿ ಪೋಷಕರ ಆಸೆಯನ್ನು ಈಡೇರಿಸುವಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಗಮನ ಕೊಡಬೇಕೆಂದು ಹೇಳಿದರು. ಪ್ರಾಚಾರ್ಯರಾದ ಡಾ. ಎಸ್.ಎಂ. ಶಶಿzರ್ ಅವರು ಮಾತನಾಡಿ ತಾಂತ್ರಿಕ ವಿದ್ಯಾರ್ಥಿಗಳು ತಮ್ಮ ಪರಿಣಿತಿಯೊಂದಿಗೆ ಆಡಳಿತ ಸೇವೆಯ ಅವಕಾಶ ಪಡೆದರೆ ದೇಶದ ಪ್ರಗತಿ ಪಯಣದಲ್ಲಿ ಮುಖ್ಯ ಪಾತ್ರ ವಹಿಸಬಹುದು ಎಂದು ಅಭಿಪ್ರಾಯ ಪಟ್ಟರು.

ಈ ಸಮಾರಂಭದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಏಕಾಮರೇಶ ತಾಂಡೂರ,        ಡಾ. ನಿಜಲಿಂಗಪ್ಪ ಮತ್ತು ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು. ಡಾ. ಕೆ. ಶರಣಬಸಮ್ಮ ಅವರು ಸ್ವಾಗತ ಭಾಷಣ ಮಾಡಿದರು. ಪ್ರೋ. ಜೀವಿತಾ ನಿರೂಪಿಸಿದರು, ಕುಮಾರಿ ಭುವನೇಶ್ವರಿ ಹಾಗೂ ಮೇಘಾ ಪ್ರಾರ್ಥಿಸಿದರು. ಡಾ. ಎನ್. ಪ್ರಭುದೇವ್ ಅವರು ವಂದಿಸಿದರು. ಈ ಕಾರ್ಯಕ್ರಮದಲ್ಲಿ ೨೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಪಾಲ್ಗೊಂಡಿದ್ದರು.

Filed in: Events Tags: 

Get Updates

Share This Post

Related Posts

© 2021 PROUD TIMES : ಪ್ರೌಢ ವಿಜಯ. All rights reserved.