ಜೀವ ರಕ್ಷಣೆಗೆ ಕಾರಣವಾಗುವ ರಕ್ತದಾನದಂತಹ ಮಹತ್ತರ ಕಾರ್ಯದಲ್ಲಿ ವಿದ್ಯಾರ್ಥಿಗಳು ಭಾಗಿಯಾಗಬೇಕು ಎಂದು ಹೊಸಪೇಟೆಯ ವಿಜಯನಗರ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ವಿ.ಎಸ್. ಪ್ರಭಯ್ಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ಶುಕ್ರವಾರ ೨೨ರಂದು ಆಯೋಜಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
೧೮ರಿಂದ ೬೦ ವರ್ಷ ಒಳಗಿನ, ಮಾನಸಿಕ, ದೈಹಿಕ ಸದೃಢ ಹೊಂದಿದ ೫೦ ಕೆ.ಜಿ. ತೂಕದ ವ್ಯಕ್ತಿಗಳು ರಕ್ತದಾನ ಮಾಡಲು ಅರ್ಹರು. ಆರೋಗ್ಯವಂತ ಮನುಷ್ಯನ ದೇಹದಲ್ಲಿ ೫ರಿಂದ ೬ಲೀಟರ್ ರಕ್ತ ಇರುತ್ತದೆ. ಇದರಲ್ಲಿ ಕೇವಲ ೩೫೦ ಮಿ.ಲೀ. ಮಾತ್ರ ರಕ್ತ ಪಡೆಯಲಾಗುವುದು. ದೇಶಾದ್ಯಂತ ಪ್ರತಿ ೨ ಸೆಕೆಂಡಿಗೆ ಒಬ್ಬರಂತೆ ರಕ್ತದ ಅವಶ್ಯಕತೆ ಇದೆ. ರಕ್ತದಾನದಿಂದ ಜೀವ ಉಳಿಸಬಹುದಾಗಿದ್ದು ಇದು ಶ್ರೇಷ್ಠ ದಾನವಾಗಿದೆ. ಇದರ ಬಗ್ಗೆ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳು ಪ್ರಯತ್ನಿಸಬೇಕು, ಪಿಡಿಐಟಿಯ ನೂರಾರು ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ನೋಂದಾಯಿಸಿಕೊಂಡಿರುವುದು ಶ್ಲಾಘನೀಯ ಎಂದು ಡಾ. ಪ್ರಭಯ್ಯ ಹೇಳಿದರು.
ಪಿಡಿಐಟಿಯ ಪ್ರಾಂಶುಪಾಲ ಡಾ.ಎಸ್.ಎಂ.ಶಶಿಧರ್ ಮಾತನಾಡಿ ರಕ್ತಕ್ಕೆ ಬೇರೆ ಪರ್ಯಾಯವಿಲ್ಲ. ವೈದ್ಯಲೋಕ ಸಾಕಷ್ಟು ಮುಂದುವರಿದಿದ್ದು, ಕೃತಕ ಅಂಗಾಂಗಗಳನ್ನು ಕಸಿ ಮಾಡಿಯೂ ಆಗಿದೆ. ಆದರೆ ಕೃತಕ ರಕ್ತ ಸೃಷ್ಟಿ ಸಾಧ್ಯವಾಗಿಲ್ಲ. ಎಷ್ಟೇ ಕೋಟಿ ಕೊಟ್ಟರೂ ರಕ್ತ ಸೃಷ್ಟಿ ಮಾಡಲಾಗುವುದಿಲ್ಲ. ಹೀಗಾಗಿ ರಕ್ತದಾನದ ಮೂಲಕ ಮಾತ್ರ ಬೇಡಿಕೆಯನ್ನು ಪೂರೈಸಬಹುದು. ಈ ನಿಟ್ಟಿನಲ್ಲಿ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರೆ, ಮಾನವೀಯ ಸಮಾಜ ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಸಂಯೋಜಕ ಆರ್. ನವೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು ಪ್ರತಾಪ್ ಕುಲಕರ್ಣಿ ವಂದನಾರ್ಪಣೆ ಸಲ್ಲಿಸಿದರು. ಶಿಬಿರದಲ್ಲಿ ಅರ್ಹ ನೂರಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ರಕ್ತದಾನ ಮಾಡಿದರು.
0
ರಕ್ತದಾನ ಮಾಡಿ, ಜೀವ ಉಳಿಸಿ -ವಿದ್ಯಾರ್ಥಿಗಳಿಗೆ ಡಾ. ಪ್ರಭಯ್ಯ ಕಿವಿಮಾತು
Filed in: Activities, NSS